ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಬಾರದು

New Delhi: President Ram Nath Kovind addresses the nation on the eve of Republic Day in New Delhi on Thursday. PTI Photo / RB(PTI1_25_2018_000203B)

ನವದೆಹಲಿ,ಮೇ 8- ಒಂದು ವೇಳೆ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಂತೆ ರಾಷ್ಟ್ರಪತಿಗಳಿಗೆ ವಿರೋಧ ಪಕ್ಷಗಳು ಪತ್ರ ಬರೆಯಲು ಮುಂದಾಗಿವೆ.

ಕಾಂಗ್ರೆಸ್ ಸೇರಿದಂತೆ ಸುಮಾರು 21ಕ್ಕೂ ಹೆಚ್ಚು ವಿರೋಧ ಪಕ್ಷಗಳು ಇದೇ 19ರಂದು 7ನೇ ಹಾಗೂ ಅಂತಿಮ ಸುತ್ತಿನ ಲೋಕಸಭೆ ಚುನಾವಣೆಯ ಮತದಾನ ಮುಗಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಈ ಪ್ರಸ್ತಾಪವನ್ನು ಮುಂದಿಡಲಿದ್ದಾರೆ.

ಯಾವುದೇ ಪಕ್ಷಕ್ಕೂ ಬಹುಮತ ಬಾರದಿದ್ದರೆ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಯಾರನ್ನೂ ಸರ್ಕಾರ ರಚಿಸಲು ಆಹ್ವಾನಿಸಬೇಡಿ. ಬಹುಮತ ಬಂದರೆ ಯಾವಾಗ ಬೇಕಾದರೂ ಆಹ್ವಾನ ನೀಡಬಹುದು. ಅತಂತ್ರ ಪರಿಸ್ಥಿತಿಯಲ್ಲಿ ಆಹ್ವಾನಿಸಿದರೆ ಸಂಸದರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ ಎಂಬುದನ್ನು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಡಿಎಂಕೆಯ ಸ್ಟಾಲಿನ್, ಆರ್‍ಜೆಡಿ ಸೇರಿದಂತೆ 21ಕ್ಕೂ ಹೆಚ್ಚು ವಿರೋಧ ಪಕ್ಷದವರು ಶೀಘ್ರದಲ್ಲೇ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿರ್ಧಾರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

2018ರ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಬಿಜೆಪಿಗೆ ಒಂದೇ ದಿನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿತ್ತು.

ಇದರ ನಡುವೆ ಶಾಸಕರನ್ನು ಖರೀದಿಸಲು ಎಲ್ಲ ರೀತಿಯ ಪ್ರಯತ್ನ ನಡೆದಿತ್ತು. ಹೀಗಾಗಿ ರಾಷ್ಟ್ರಪತಿಗಳು ತಮಗಿರುವ ಪರಮಾಧಿಕಾರವನ್ನು ಬಳಸಿಕೊಂಡು ಬಹುಮತ ಬಾರದಿದ್ದರೆ ಯಾವ ಪಕ್ಷಕ್ಕೂ ಸರ್ಕಾರ ರಚಿಸಲು ಅವಕಾಶ ನೀಡಬಾರದೆಂದು ಮನವಿ ಮಾಡಲಿದ್ದಾರೆ.

1998ರಲ್ಲಿ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಅಂದು ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೂ ಅಧಿಕಾರ ಬಾರದಿದ್ದಾಗ ಏಕೈಕ ದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಬಿಜೆಪಿ 178 ಸ್ಥಾನ ಗೆದ್ದಿದ್ದರೆ ಮೈತ್ರಿ ಪಕ್ಷಗಳ ಬೆಂಬಲದಿಂದ ಒಟ್ಟು 252 ಸ್ಥಾನಗಳ ಬೆಂಬಲವಿತ್ತು.

ಎಐಎಡಿಎಂಕೆ ಬಾಹ್ಯ ಬೆಂಬಲ ನೀಡಿದ್ದರಿಂದ ವಾಜಪೇಯಿ 20 ತಿಂಗಳು ಕೇಂದ್ರದಲ್ಲಿ ಪ್ರಧಾನಿಯಾಗಿದ್ದರು. ಕೊನೆಗೊಂದು ದಿನ ಸರ್ಕಾರದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಕೇಂದ್ರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ತೆಗೆದುಕೊಂಡರು.

ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ವಾಜಪೇಯಿ ಅವರಿಗೆ ಎದುರಾಗಿತ್ತು. ಅಂತಿಮವಾಗಿ ಒಂದೇ ಒಂದು ಮತಗಳ ಕೊರತೆಯಿಂದಾಗಿ ಅವರು ಪ್ರಧಾನಿ ಸ್ಥಾನವನ್ನು ಕಳೆದುಕೊಂಡರು.

ಹೀಗಾಗಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಸಂಖ್ಯೆಯನ್ನು ರಾಷ್ಟ್ರಪತಿಗಳ ಮುಂದೆ ನೀಡುವವರೆಗೂ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬಾರದೆಂಬ ಕೋರಿಕೆಯನ್ನು ಪ್ರತಿಪಕ್ಷಗಳು ಮುಂದಿಡಲಿವೆ.

ಯಾವುದೇ ಚುನಾವಣೆಯಲ್ಲಿ ಸರ್ಕಾರ ರಚನೆ ಮಾಡಲು ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಜನಾದೇಶ ಸಿಗದಿದ್ದಾಗ ರಾಷ್ಟ್ರಪತಿಗಳು ತೆಗೆದುಕೊಳ್ಳುವ ತೀರ್ಮಾನವೇ ನಿರ್ಣಾಯಕವಾಗಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ