ಹಾಸನ, ಮೇ. 8- ಬರ ಅಧ್ಯಯನ ಪ್ರವಾಸ ಮತ್ತು ಬರ ಸಂಬಂಧದ ಸಭೆ ನಡೆಸಲು ಬಿಜೆಪಿ ಮುಖಂಡರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬರ ಪ್ರದೇಶಗಳಿಗೆ ಸಚಿವರು ಭೇಟಿ ನೀಡಲ್ಲ ಎಂದು ಬಿಜೆಪಿಯವರು ಹೇಳ್ತಾರೆ, ಇನ್ನೊಂದು ಕಡೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡ್ತಾರೆ.. ಹೀಗಾದ್ರೆ ಬರ ಸಂಬಂಧದ ಸಭೆ ಮಾಡಬೇಕೋ..ಮಾಡಬಾರದೋ ಎಂದು ಖಾರವಾಗಿ ಪ್ರಶ್ನಿಸಿದರು.
ಬರ ಸಂಬಂಧ ಕೆಲಸ ಮಾಡಲು ಹೋದರೆ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂಬುದಾಗಿ ದೂರು ಕೊಡ್ತಾರೆ.ಇವರಿಗೆ ಜನರು ಬೇಕಾಗಿಲ್ಲ, ಅಧಿಕಾರ ಇದ್ದರೆ ಸಾಕು ಎಂದು ಕಿಡಿಕಾರಿದರು.
ಜಿಲ್ಲೆಗೆ ಬರಪರಿಹಾರಕ್ಕೆ ಕೋಟ್ಯಾಂತರ ರೂ. ಹಣ ಬಂದಿದೆ. ಆದರೆ ಜಿಲ್ಲಾಧಿಕಾರಿಗಳು ಇದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ರೈತರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ, ರೈತರು ಆಕ್ರೋಶಗೊಂಡು ಬೀದಿಗಿಳಿತಾರೆ. ಹಾಗೇನಾದರೂ ಆದರೆ ಜಿಲ್ಲಾಧಿಕಾರಿಯೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೆಲವೆಡೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಸ್ಥಳೀಯ ಚುನಾವಣಾಧಿಕಾರಿಗಳೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ.ನಮ್ಮ ರಾಜ್ಯ ಕೇಳಿದಷ್ಟು ಅನುದಾನ ಕೊಡಲಿಲ್ಲ. ಆದರೆ ಒಡಿಶಾದವರು 100ಕೋಟಿ ಕೇಳಿದರೆ ಸಾವಿರ ಕೋಟಿ ಕೊಡ್ತಾರೆ ಎಂದು ರೇವಣ್ಣ ಕಿಡಿಕಾರಿದರು.
ಫಲಿತಾಂಶ ಪರಿಣಾಮ ಬೀರಲ್ಲ:
ಲೋಕಸಭಾ ಚುನಾವಣೆ ಫಲಿತಾಂಶ ಏನೇ ಬಂದರೂ ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇದೇ ವೇಳೆ ರೇವಣ್ಣ ತಿಳಿಸಿದರು.
ಮಂಡ್ಯ, ಹಾಸನ, ತುಮಕೂರಿನಲ್ಲಿ ನಿಖಿಲ್, ಪ್ರಜ್ವಲ್ ಮತ್ತು ದೇವೇಗೌಡರು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.