ಕಲಬುರಗಿ, ಮೇ 8-ಚಿಂಚೋಳಿ ಕ್ಷೇತ್ರದ ಉಪಚುನಾವಣೆ ಕದನದಲ್ಲಿ ಪಿಯುಸಿ ಫಲಿತಾಂಶ ಚರ್ಚೆಯಾಗಿದ್ದು, ನಾಯಕರು ಪರಸ್ಪರ ತಮ್ಮ ಕುಟುಂಬದ ಸದಸ್ಯರನ್ನು ಮುಂದಿಟ್ಟುಕೊಂಡು ಆರೋಪ-ಪ್ರತ್ಯಾರೋಪ ಮಾಡಿರುವ ಕೆಟ್ಟ ರಾಜಕಾರಣ ನಡೆದಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಡಾ.ಉಮೇಶ್ ಜಾಧವ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಪುತ್ರಿ ಪಿಯುಸಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜಕಾರಣದ ಮಧ್ಯೆ ಕುಟುಂಬದ ಸದಸ್ಯರನ್ನು ತರುವುದು ಅವಿವೇಕತನದ ಪರಮಾವಧಿ ಎಂದು ತಿರುಗೇಟು ನೀಡಿದ್ದಾರೆ.
ಉಮೇಶ್ ಜಾಧವ್ ಆರೋಪ:
ಕಾಂಗ್ರೆಸ್ ನಾಯಕರು ನಾನು ಹಣ ಪಡೆದು ಬಿಜೆಪಿಗೆ ಹೋಗಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದರಿಂದ ನನ್ನ ಮಗಳು ಮಾನಸಿಕವಾಗಿ ನೊಂದು ಹೋಗಿದ್ದಾಳೆ. ಅವಳ ಕಾಲೇಜಿನಲ್ಲಿ ಈ ವಿಷಯ ಚರ್ಚೆಯಾಗಿ ನನ್ನ ಮಗಳನ್ನು ಹಂಗಿಸಿದ್ದಾರೆ. ಇದರಿಂದ ಕುಗ್ಗಿ ಹೋದ ಅವಳು ಸರಿಯಾಗಿ ಓದಲಾಗದೆ, ಪರೀಕ್ಷೆ ಬರೆಯಲಾಗದೆ ಪಿಯುಸಿಯಲ್ಲಿ ಫೇಲ್ ಆಗಿದ್ದಾಳೆ ಎಂದು ಉಮೇಶ್ ಜಾಧವ್ ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ತಿರುಗೇಟು:
ಇದಕ್ಕೆ ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಉಮೇಶ್ ಜಾಧವ್ ಅವರಿಗೆ ವಿವೇಕ ಇಲ್ಲದಿರಬಹುದು, ಆದರೆ ನನಗಿದೆ. ರಾಜಕಾರಣದ ನಡುವೆ ಕುಟುಂಬ ಸದಸ್ಯರನ್ನು ಎಳೆ ತರುವುದು ಸರಿಯಲ್ಲ ಎಂದು ಹೇಳಿದರು.
ಖರ್ಗೆ ವಿರುದ್ಧ ಶ್ರೀಮಂತ ದಲಿತ ಎಂದು ಉಮೇಶ್ ಜಾಧವ್ ಆರೋಪ ಮಾಡಿದಾಗ, ನಮ್ಮ ಕುಟುಂಬದ ಸದಸ್ಯರಿಗೂ ನೋವಾಗಿತ್ತು. ನಮಗೂ ಮನೆಯಲ್ಲಿ ಅಕ್ಕ, ತಂಗಿ, ಹೆಂಡತಿ, ಮಕ್ಕಳಿದ್ದಾರೆ. ಅವರು ಆರೋಪಗಳು ಬಂದಾಗ ಪ್ರಶ್ನಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಮೇಶ್ ಜಾಧವ್ ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ಸ್ಪಷ್ಟವಾದ ಕಾರಣ ಇಲ್ಲ. ಹಾಗಾಗಿ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಮೇಶ್‍ಜಾಧವ್ ಮತ್ತು ರವಿಕುಮಾರ್ ಕೆಲಸಕ್ಕೆ ಬಾರದವರು. ಐದು ವರ್ಷದಿಂದ ಅವರೇನು ಕತ್ತೆ ಕಾಯುತ್ತಿದ್ದರಾ…ಎಂದು ಅವರು ಕಿಡಿಕಾರಿದರು.