ನವದೆಹಲಿ: ರೈಲು ವಿಳಂಬದಿಂದ ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದ 600 ವಿದ್ಯಾರ್ಥಿಗಳಿಗಾಗಿ ಮೇ 20ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಮತ್ತೊಮ್ಮೆ ಏರ್ಪಡಿಸಲು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಹಿಂದೆ ಮೇ 5ರಂದು ನೀಟ್ ಪರೀಕ್ಷೆ ಆಯೋಜಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ರಾಜ್ಯದ ನಾನಾ ಭಾಗಗಳಿಂದ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಇದರ ಜತೆಗೆ ಬೆಂಗಳೂರಿನಲ್ಲಿ ದಿಢೀರನೆ ಪರೀಕ್ಷಾ ಕೇಂದ್ರವನ್ನು ಬದಲಿಸಲಾಗಿತ್ತು. ಇದರಿಂದಾಗಿ ಪೂರ್ವ ನಿಗದಿಯಂತೆ ನಿರ್ದಿಷ್ಟ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಕಷ್ಟು ಪರದಾಡಬೇಕಾಗಿ ಬಂದಿತ್ತು. ಈ ಕಾರಣಗಳಿಂದಾಗಿ ಅಂದಾಜು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದರು.
ಈ ಹಿನ್ನಲೆಯಲ್ಲಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮೇ 20ರಂದು ಮತ್ತೊಮ್ಮೆ ನೀಟ್ ಪರೀಕ್ಶೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.