ಬೆಂಗಳೂರು,ಮೇ7- ಸರಸ್ವತಿ ಮತ್ತು ಬುದ್ಧನ ಮೂರ್ತಿ ವಿಚಾರಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂಭಾಗ ದೊಡ್ಡ ಪ್ರತಿಭಟನೆ ನಡೆದಿದೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಆಗಾಗ ಗಲಾಟೆ, ವಾದ-ವಿವಾದಗಳು ನಡೆಯುತ್ತಲೇ ಇರುತ್ತದೆ. ವಿದ್ಯೆ ಕೊಡುವ ಸರಸ್ವತಿ ಪ್ರತಿಮೆಯೋ, ಇಲ್ಲ ಶಾಂತಿ ಪ್ರಿಯ ಬುದ್ಧನ ಪ್ರತಿಮೆಯೋ ಎಂಬ ವಿವಾದ ಈಗ ಭುಗಿಲೆದ್ದಿದೆ.
ಸರಸ್ವತಿ ಮತ್ತು ಬುದ್ಧನ ಮೂರ್ತಿ ವಿಚಾರಕ್ಕೆ ನಿನ್ನೆ ಬೆಂಗಳೂರು ವಿವಿ ಮುಂಭಾಗ ದೊಡ್ಡ ಪ್ರತಿಭಟನೆ ನಡೆದಿದೆ. ಅಂದ ಹಾಗೇ, ಬೆಂಗಳೂರು ವಿವಿ ಪ್ರಧಾನ ಕಚೇರಿ ಮುಂಭಾಗ ಹಲವು ವರ್ಷಗಳ ಹಿಂದೆ ಅಂದರೆ 1973 ರಿಂದಲೇ ಸರಸ್ವತಿ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಆದರೆ, ಕಳೆದ ಕೆಲ ದಿನಗಳಿಂದ ಸರಸ್ವತಿ ವಿಗ್ರಹ ವಿರೂಪಗೊಂಡ ಹಿನ್ನೆಲೆ, ಅದನ್ನ ತೆರವು ಮಾಡಿ ಹೊಸ ವಿಗ್ರಹ ಕೂರಿಸಲು ಏರ್ಪಾಡು ಮಾಡಲಾಗಿತ್ತು. ಪ್ರತಿಮೆ ವಿವಾದದಲ್ಲಿ ಬೆಂಗಳೂರು ವಿವಿ ಇದಕ್ಕಾಗಿ 2.50 ಲಕ್ಷ ರೂಪಾಯಿ ವೆಚ್ಚ ಮಾಡಿ ಹೊಸ ಪ್ರತಿಮೆ ಸಿದ್ದಪಡಿಸಲಾಗಿದೆ.
ಇನ್ನು ಎರಡು ದಿನಗಳಲ್ಲಿ ಉದ್ಘಾಟನೆ ಮಾಡಲು ತಯಾರಿ ನಡೆದಿತ್ತು. ಆದರೆ, ಕೆಲ ವಿದ್ಯಾರ್ಥಿಗಳು ಸರಸ್ವತಿ ವಿಗ್ರಹವನ್ನು ತೆರವು ಮಾಡಿದ್ದ ಜಾಗದಲ್ಲಿ ಬುದ್ಧನ ವಿಗ್ರಹ ಇಟ್ಟು ವಿವಾದ ಸೃಷ್ಟಿಸಿದ್ದಾರೆ. ಅದನ್ನು ತೆರವು ಮಾಡಲು ವಿವಿ ಸಿಬ್ಬಂದಿ ಮುಂದಾದಾಗ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಸಂಬಂಧ ತಡರಾತ್ರಿ ಸಿಂಡಿಕೇಟ್ ಸಭೆಯನ್ನೂ ನಡೆಸಲಾಗಿದೆ.