ಬೆಂಗಳೂರು, ಮೇ 7-ಬಸವೇಶ್ವರ ಜಯಂತಿ ಅಂಗವಾಗಿ ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಎಂ.ಬಿ.ಪಾಟೀಲ್ ಮತ್ತಿತರರು ಗಣ್ಯರು ಮಾಲಾರ್ಪಣೆ ಮಾಡಿದರು.
ಕಾಯಕವೇ ಕೈಲಾಸ ಎಂಬ ಮಂತ್ರ ನೀಡಿದ ಶತಮಾನಗಳ ಹಿಂದೆಯೇ ಸಮಾಜವಾದವನ್ನು ಜಾರಿಗೆ ತಂದವರು ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಜ್ಯೋತಿ ಬಸವೇಶ್ವರರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಶುಭಾಶಯ ತಿಳಿಸಿದ ಅವರು, ಮನುಕುಲಕ್ಕೆ ಹೆಮ್ಮೆಯ ಕೊಡುಗೆಯನ್ನು ನೀಡಿರುವ ಅವರು, ಜೀವನದ ರಹಸ್ಯವನ್ನು ಸರಳವಾಗಿ ಹೇಳಿದವರು. ಬಸವೇಶ್ವರರು ರೂಪಿಸಿದ ಸರ್ವ ಜನಾಂಗದ ಶಾಂತಿಯ ಆದರ್ಶ ಅನುಕರಣೀಯ.ಅಪರೂಪದ ದಿವ್ಯ ಚೇತನ ಬಸವಣ್ಣನವರು. ಅವರು ರೂಪಿಸಿಕೊಟ್ಟ ದಾರಿಯಲ್ಲಿ ಸಾಗುವ ಸಂಕಲ್ಪ ನಮ್ಮದಾಗಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕಲ್ಯಾಣಕರ್ನಾಟಕ ಹಾಗೂ ಜಾತಿ ರಹಿತ ಸಮಾಜ ನಿರ್ಮಾಣ ಮತ್ತು ಸುಂದರ ಸಮಾಜ ನಿರ್ಮಾಣದ ಕನಸು ಬಸವಣ್ಣನವರದಾಗಿತ್ತು ಎಂದು ಹೇಳಿದರು.