ಬಸವಣ್ಣನವರು ಸಮಾಜದ ಸಾಮರಸ್ಯ ಕಾಪಾಡಲು ಶ್ರಮಿಸಿದ್ದಾರೆ-ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು, ಮೇ 7- ಸಾಮಾಜಿಕ ಜಾಲತಾಣಗಳು ಸಮಾಜದ ಆರೋಗ್ಯ ಕೆಡಿಸುವ ಕೆಲಸ ಮಾಡಬಾರದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾದ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಬಸವ ಸಮಿತಿ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಯಕ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದವರನ್ನು ಜೀರೋ ಆಗುವ ರೀತಿ, ಜೀರೋ ಆಗಿದ್ದವರನ್ನು ಹೀರೋ ಆಗುವ ರೀತಿ ಬಿಂಬಿಸುವುದು ಸರಿಯಲ್ಲ. ಇದರಿಂದ ಸಮಾಜದ ಆರೋಗ್ಯ ಕೆಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿವೇಚನೆ, ಸಂಸ್ಕøತಿ, ಧರ್ಮ, ಸಂಪ್ರದಾಯಗಳು ಇದ್ದವರು ಮನುಷ್ಯರಾಗುತ್ತಾರೆ ಎಂದ ಅವರು, ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಬಸವಣ್ಣನವರು ಸಮಾಜದ ಸಾಮರಸ್ಯ ಕಾಪಾಡಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಜಯದೇವ ಆಸ್ಪತ್ರೆಗೆ ಬರುವಂತಹ ಶ್ರೀಮಂತರು ರಿಯಾಯಿತಿ ಕೇಳುತ್ತಾರೆ. ಅಷ್ಟೇ ಅಲ್ಲದೆ ಶ್ರೀಮಂತರು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುತ್ತಾರೆ.ಜತೆಗೆ ಆರೋಪವನ್ನು ಕೂಡ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಬಸವಣ್ಣನವರು 12ನೆ ಶತಮಾನದಲ್ಲೇ ಸಮ ಸಮಾಜದ ಪರಿಕಲ್ಪನೆಯನ್ನು ಜಾರಿಗೆ ತಂದರು.

ಕಾಯಕ, ಸಮಭಾವ, ದಯೆ, ಕರುಣೆ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಪ್ರಯತ್ನ ಮಾಡಿ ಹೊಸ ಸಮಾಜ ನಿರ್ಮಿಸುವ ಪ್ರಯತ್ನ ಮಾಡಿದ್ದರು. ಅವರ ತತ್ತ್ವಾದರ್ಶಗಳು ಅನುಕರಣೀಯವಾಗಿವೆ ಎಂದು ಹೇಳಿದರು.

ಡಾ.ಜೆ.ಎಸ್.ಖಂಡೇರಾವ್, ಎಚ್.ಎಂ.ಸ್ವಾಮಿ, ಜಿ.ಎನ್.ಬಸವರಾಜಪ್ಪ ಅವರಿಗೆ ಬಸವ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಪದ್ಮಶ್ರೀ ಡಾ.ಸುಧಾಮೂರ್ತಿ ಅವರ ಪರವಾಗಿ ಸಹೋದರಿ ಸುನಂದಾ ಕುಲಕರ್ಣಿ ಅವರು ದಾಸೋಹ ರತ್ನ ಪ್ರಶಸ್ತಿ ಸ್ವೀಕಾರ ಮಾಡಿದರು.

ಬೇಲಿಮಠದ ಅಧ್ಯಕ್ಷರಾದ ಶ್ರೀ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ