
ಕಲಬುರ್ಗಿ,ಮೇ 7- ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ಗೆಲುವಿಗೆ ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದು, ಬಿಜೆಪಿಯನ್ನು ಕಟ್ಟಿಹಾಕಲು ಚಕ್ರವ್ಯೂಹ ರಚಿಸಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಘಟಾನುಘಟಿ ನಾಯಕರು ಬೀಡು ಬಿಟ್ಟಿದ್ದು ಗೆಲುವಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪಣ ತೊಟ್ಟಿದ್ದು ದೆಹಲಿ ಪ್ರವಾಸವನ್ನು ದಿಢೀರ್ ರದ್ದು ಮಾಡಿ ಕಲಬುರಗಿಯಲ್ಲೇ ಖರ್ಗೆ ವಾಸ್ತವ್ಯ ಹೂಡಿದ್ದಾರೆ.
ಯಾವುದೇ ಕಾರಣಕ್ಕೂ ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲಬಾರದೆಂದು ಪ್ಲ್ಯಾನ್ ನಡೆಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಚಿಂಚೋಳಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ಒಂದು ವೇಳೆ ಚಿಂಚೋಳಿ ಉಪಚುನಾವಣೆಯಲ್ಲಿ ಸೋತರೆ ತಮಗೆ ಅಪಕೀರ್ತಿ ಉಂಟಾಗುವುದಲ್ಲದೇ ಕಲಬುರಗಿಯಲ್ಲಿ ತಮ್ಮ ಹಿಡಿತ ಸಡಿಲಗೊಳ್ಳುವ ಆತಂಕ ಖರ್ಗೆಯವರಿಗೆ ಎದುರಾಗಿದೆ.ಹೀಗಾಗಿ ಶತಾಯಗತಾಯ ಚಿಂಚೋಳಿಯಲ್ಲಿ ಕೈ ಅಭ್ಯರ್ಥಿ ಸುಭಾಷ್ ರಾಠೋಡ್ ಗೆಲುವಿಗೆ ಖರ್ಗೆಯವರು ಟೊಂಕ ಕಟ್ಟಿ ನಿಂತಿದ್ದಾರೆ.
ಉಪ ಚುನಾವಣೆ ಬರಲು ಡಾ.ಉಮೇಶ್ ಜಾಧವ್ ಕಾರಣ ಎಂದು ಬಿಂಬಿಸುವುದು ಹಾಗೂ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಹಾಗೂ ಡಾ.ಉಮೇಶ್ ಜಾಧವ್ ಚಿಂಚೋಲಿ ಮತದಾರರನ್ನು ಮಾರಾಟ ಮಾಡಿದ್ದಾರೆ ಎಂಬುದನ್ನು ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ನಿರ್ಧರಿಸಲಾಗಿದೆ.
ಚುನಾವಣೆ ತಂತ್ರಗಾರಿಕೆ ಕುರಿತಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಖರ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮುಖ ಕಾರ್ಯಕರ್ತರ ಜೊತೆ ಸಭೆ ನಡೆಸಿದರು.
ಚೆಂಗಟಾ, ಚಂದನಕೇರಾ, ಕಟಗಲ್ ಸೇರಿದಂತೆ ಹಲವು ಕಡೆಗಳಲ್ಲಿ ಕೈ ನಾಯಕರು ಬಿರುಸಿನ ಪ್ರಚಾರ ನಡೆಸಿದರು.
ಕುಂದಗೋಳದಲ್ಲಿ ಡಿಕೆಶಿ:
ಗೆಳೆಯ ಸಿ.ಎಸ್.ಶಿವಳ್ಳಿಯವರ ಕ್ಷೇತ್ರ ಉಳಿಸಿಕೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ಅವರು ಅಖಾಡಕ್ಕಿಳಿದಿದ್ದು ಸ್ಥಳೀಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಅಕ್ಷಯ ತೃತೀಯ ದಿನವಾದ ಇಂದು ಅವರು ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ತಾಲೂಕಿನಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.ಶಿವಳ್ಳಿಯವರು ಸಚಿವರಾಗಿದ್ದಾಗ ಮಾಡಿದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಿ ಸಮ್ಮಿಶ್ರ ಸರ್ಕಾರವನ್ನು ಇನ್ನಷ್ಟು ಸುಭದ್ರಗೊಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.ತಾಲೂಕಿನ ಪ್ರಮುಖ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಸಾಥ್ ನೀಡಿದರು.