ಬಿಸಿಲಿಗೆ ಸಿಕ್ಕ ಕಾರ್ಮೋಡದಂತೆ ಕರಗಿಹೋದ ಮೈತ್ರಿ ಸರ್ಕಾರಕ್ಕಿದ್ದ ಅಪಾಯ

ಬೆಂಗಳೂರು, ಮೇ 7- ಸಮ್ಮಿಶ್ರ ಸರ್ಕಾರಕ್ಕೆ ಅಪಾಯತಂದೊಡ್ಡುವ ಬೆಳವಣಿಗೆಗಳು ಕ್ಷೀಣಿಸುತ್ತಿ ರುವುದರಿಂದ ಜೆಡಿಎಸ್-ಕಾಂಗ್ರೆಸ್ ನಾಯಕರು ನಿರಾಳವಾಗಿದ್ದು, ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಎಲ್ಲಾ ರೀತಿಯ ಸಂಧಾನ ಸಭೆಗಳನ್ನು ರದ್ದುಗೊಳಿಸಿದ್ದಾರೆ.

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಡಾಯ ಮತ್ತು ರಾಜೀನಾಮೆ ಪ್ರಹಸನ ಹಾಗೂ ಕಾಂಗ್ರೆಸ್‍ನ ಸಮಾನ ಮನಸ್ಕ ಶಾಸಕರ ಸಭೆಯ ಪ್ರಯತ್ನ ದೋಸ್ತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಹಾಗಾಗಿ ಕೆಲಕಾಲ ತಳಮಳದಲ್ಲಿದ್ದ ಎರಡೂ ಪಕ್ಷಗಳ ನಾಯಕರು ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.

ಕಾಂಗ್ರೆಸ್ ಶಾಸಕರ ಬಂಡಾಯಕ್ಕೆ ಬಿಜೆಪಿ ಪಾಳಯದಿಂದ ನಿರೀಕ್ಷಿತ ಮಟ್ಟದ ಬೆಂಬಲ ಸಿಗಲಿಲ್ಲ. ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆವರೆಗೂ ಯಾವುದೇ ರೀತಿಯ ಚಟುವಟಿಕೆಗಳು ಬೇಡ ಎಂದು ಕಟ್ಟಪ್ಪಣೆ ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರಿಂದ ಸ್ಥಳೀಯ ರಾಜಕಾರಣದ ಚರ್ಚೆ ಸರಿಯಾದ ಹಾದಿಯಲ್ಲಿ ಸಾಗಲಿಲ್ಲ. ರಾಷ್ಟ್ರೀಯ ಮುಖಂಡರ್ಯಾರೂ ಜವಾಬ್ದಾರಿ ಹೊತ್ತುಕೊಳ್ಳಲು ಮುಂದೆ ಬರಲಿಲ್ಲ. ಹೀಗಾಗಿ ಬಿಜೆಪಿ ಪಾಳಯದಿಂದ ಅತೃಪ್ತರಿಗೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ರಮೇಶ್ ಜಾರಕಿ ಹೊಳಿ ಅವರ ರಾಜೀನಾಮೆ ಹೇಳಿಕೆಯಿಂದ ಏನೋ ಸಂಭವಿಸಲಿದೆ ಎಂಬ ಆತಂಕದಲ್ಲಿದ್ದ ದೋಸ್ತಿ ಸರ್ಕಾರಕ್ಕೆ ಅಪಾಯ ಬಿಸಿಲಿಗೆ ಸಿಕ್ಕ ಕಾರ್ಮೋಡದಂತೆ ಕರಗಿ ಹೋಯಿತು.

ಅದರ ಬೆನ್ನಲ್ಲೇ ಕಾಂಗ್ರೆಸ್‍ನ ಶಾಸಕ ಎಸ್.ಟಿ.ಸೋಮಶೇಖರ್ ಸಮಾನ ಮನಸ್ಕರ ಸಭೆ ಆಯೋಜನೆಗೆ ಮುಂದಾದರು. ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ ಅಧ್ಯಕ್ಷರಾಗಿ ಪೂರ್ಣಪ್ರಮಾಣದಲ್ಲಿ ಅಧಿಕಾರ ಚಲಾಯಿಸಲು ಅವಕಾಶವಾಗದಂತೆ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂಬ ಅಸಮಾಧಾನ ಅವರನ್ನು ಕಾಡುತ್ತಿದೆ. ಈ ಅಸಮಾಧಾನದ ಹಿನ್ನೆಲೆಯಲ್ಲಿಯೇ ಸೋಮಶೇಖರ್ ಅತೃಪ್ತರ ಸಭೆ ಕರೆದಿದ್ದರು. ಕಾಂಗ್ರೆಸ್‍ನ ಬಹಳಷ್ಟು ಶಾಸಕರು ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿರುವ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅದೇ ಸಮಯಕ್ಕೆ ಕಾಂಗ್ರೆಸ್‍ನ ನಾಯಕರು ಸೋಮಶೇಖರ್ ಅವರಿಗೆ ಬೇರೆ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು. ಅಲ್ಲಿಗೆ ಸಮಾನ ಮನಸ್ಕರ ಸಭೆ ಕೂಡ ರದ್ದಾಯಿತು.

ಇದೆಲ್ಲದರ ಹೊರತಾಗಿಯೂ ಕಾಂಗ್ರೆಸ್‍ನ ಶಾಸಕರಲ್ಲಿ ಈಗಲೂ ಅತೃಪ್ತಿ, ಅಸಮಾಧಾನಗಳು ಹೊಗೆಯಾಡುತ್ತಿವೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಸೇರಿದಂತೆ ಹಲವಾರು ಮಂದಿ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ.

ಕಾಂಗ್ರೆಸ್ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದರು.ಆದರೆ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ದುರ್ಬಲವಾಗಿರುವುದರಿಂದ ಸದ್ಯಕ್ಕೆ ಯಾವುದೇ ಸಭೆಗಳು ಬೇಡ ಎಂದು ಮುಖ್ಯಮಂತ್ರಿ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಮೇ 9ರಂದು ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಸೇರುತ್ತಿದೆ. ಅಲ್ಲಿ ಸಮ್ಮಿಶ್ರ ಸರ್ಕಾರದ ಸ್ಥಿರತೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಚುನಾವಣಾ ಫಲಿತಾಂಶದ ಬಳಿಕ ಉಂಟಾಗಬಹುದಾದ ಭಿನ್ನಮತೀಯ ಚಟುವಟಿಕೆಗಳಿಗೂ ಸಂಪುಟ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ಚರ್ಚೆಗಳಾಗಲಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕುಮಾರಸ್ವಾಮಿಯವರು ಇಂದು ಕರೆದಿದ್ದ ಕಾಂಗ್ರೆಸ್ ಶಾಸಕರ ಸಭೆಯನ್ನು ರದ್ದುಗೊಳಿಸಲಾಗಿದೆ.

ಸಂಸದ ಬಿ.ವಿ.ನಾಯಕ್ ಅವರು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಜೊತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾದಂತಿದ್ದು, ನನ್ನಿಂದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಿಲ್ಲ ಎಂದು ರಮೇಶ್ ಜಾರಕಿ ಹೊಳಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ