![jds-bjp-congresss](http://kannada.vartamitra.com/wp-content/uploads/2019/01/jds-bjp-congresss-1-667x381.jpg)
ಬೆಂಗಳೂರು,ಮೇ6- ಮೇ 23ರಂದು ಪ್ರಕಟಗೊಳ್ಳಲಿರುವ ಲೋಕಸಭೆ ಚುನಾವಣಾ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ.
ಆದರೆ ಸರ್ಕಾರವನ್ನು ಉಳಿಸಿಕೊಳ್ಳಲು ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮುಖಂಡರು ತಮ್ಮದೇ ಆದ ರಣತಂತ್ರವನ್ನು ರೂಪಿಸುತ್ತಿದ್ದಾರೆ. ಇದರಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವೂ ಒಂದಾಗಿದೆ.
ಯಾರು ಏನೇ ಹೇಳಿದರೂ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಭವಿಷ್ಯ ಏಳು ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆ ಬಿಜೆಪಿಗೆ ವರವಾಗಿ ಪರಿಣಮಿಸಿ 18ರಿಂದ 20 ಸ್ಥಾನಗಳನ್ನು ಗೆದ್ದರೆ ಸರ್ಕಾರಕ್ಕೆ ಕಂಟಕ ತಪ್ಪಿದಲ್ಲ.
ಆದರೆ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ದೋಸ್ತಿ ಪಕ್ಷ ಫಲಿತಾಂಶದಲ್ಲಿ ಭರ್ಜರಿ ಮೇಲುಗೈ ಸಾಧಿಸಿ ಬಿಜೆಪಿ ಒಂದಂಕಿಗೆ ಇಳಿದರೆ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ, ಸರ್ಕಾರ ಐದು ವರ್ಷಗಳ ಸುಭದ್ರವಾಗುವುದರಲ್ಲಿ ಸಂಶಯವಿಲ್ಲ.
ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರಗಳೆನಿಸಿದ್ದ ಮಂಡ್ಯ, ಹಾಸನ, ತುಮಕೂರು, ಮೈಸೂರು-ಕೊಡಗು, ಕಲಬುರಗಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಅಪ್ಪಿತಪ್ಪಿ ಫಲಿತಾಂಶ ಏರುಪೇರಾದರೆ 23ರಂದು ಸರ್ಕಾರಕ್ಕೆ ಕಂಟಕ ಎದುರಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಹೀಗಾಗಿ ಈ ಕ್ಷೇತ್ರಗಳನ್ನು ದೋಸ್ತಿ ಸರ್ಕಾರ ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ಅದೃಷ್ಟ ಕೈಕೊಟ್ಟು 7 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಪರಾಭವಗೊಂಡರೆ ದೋಸ್ತಿಗಳಲ್ಲೇ ಪರಸ್ಪರ ಅಪನಂಬಿಕೆ ಉಂಟಾಗಿ ಸರ್ಕಾರದಲ್ಲಿ ದೊಡ್ಡ ಭಿನ್ನಮತವೇ ಸೃಷ್ಟಿಯಾಗಲಿದೆ.
ಹಾಗಾದರೆ ಈ ಕ್ಷೇತ್ರಗಳು ಯಾವ ಕಾರಣದಿಂದ ಇಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನು ಕೆಳಗಿನಂತೆ ವಿಶ್ಲೇಷಸಬಹುದಾಗಿದೆ.
ಮಂಡ್ಯ:
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದ ಗಮನ ಸೆಳೆದ ಕ್ಷೇತ್ರವೆಂದರೆ ಸಕ್ಕರೆ ಜಿಲ್ಲೆ ಮಂಡ್ಯ. ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಮೊದಲು ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಒಲವು ತೋರಿದ್ದರು. ದೋಸ್ತಿಗಳಲ್ಲಿ ಮೈತ್ರಿ ಒಪ್ಪಂದದ ಪ್ರಕಾರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂದಿದ್ದರಿಂದ ಸುಮಲತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಇತಿಹಾಸ.
ಅವರೆದುರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಮಗನನ್ನು ಗೆಲ್ಲಿಸಿಕೊಂಡೇ ಕುರ್ಚಿ ಭದ್ರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕುಮಾರಸ್ವಾಮಿಗಿದೆ. ಹೀಗಾಗಿ ಈ ಬಾರಿ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಾಗಿ ಮಂಡ್ಯದತ್ತ ಗಮನಕೊಟ್ಟಿದ್ದರು.
ಜೆಡಿಎಸ್‍ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಜೆಡಿಎಸ್ ಗೆದ್ದರೆ ಸಿಎಂ ಕುಮಾರಸ್ವಾಮಿ ಕುರ್ಚಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಫಲಿತಾಂಶ ಏರುಪೇರಾದರೆ ಸರ್ಕಾರದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೈಸೂರು-ಕೊಡಗು:
ಮಂಡ್ಯದಂತೆ ರಾಜ್ಯದ ಮತ್ತೊಂದು ಪ್ರತಿಷ್ಠಿತ ಕ್ಷೇತ್ರವೆಂದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ತಮ್ಮ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಗೆಲ್ಲಿಸಿಕೊಡಲೇಬೇಕು.
ಚುನಾವಣೆಗೂ ಮುನ್ನ ಹಾವು-ಮುಂಗೂಸಿಯಂತಿದ್ದ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ.ದೇವೇಗೌಡ ಒಂದಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.
ಈ ಪ್ರತಿಷ್ಠಿತ ಸಮರದಲ್ಲಿ ಸಿದ್ದರಾಮಯ್ಯ ಗೆದ್ದರೆ ಸರ್ಕಾರದಲ್ಲಿ ಅವರ ವರ್ಚಸ್ಸು ಹಾಗೆ ಉಳಿಯುತ್ತದೆ. ಒಂದು ವೇಳೆ 2014ರ ಫಲಿತಾಂಶ ಇಲ್ಲಿ ಪುನರಾವರ್ತನೆಯಾದರೆ ಸರ್ಕಾರ ಏನು ಬೇಕಾದರೂ ಆಗಬಹುದು.
ತುಮಕೂರು :
ಕಲ್ಪತರುನಾಡು ಎಂದರೆ ಕರೆಯುವ ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ರಾಜ್ಯದ ಗಮನಸೆಳೆದ ಮತ್ತೊಂದು ಕ್ಷೇತ್ರವೆಂದರೆ ಅದುವೇ ತುಮಕೂರು.
ಜೀವನದ ಕೊನೆಯ ಚುನಾವಣೆಯನ್ನು ಎದುರಿಸುತ್ತಿರುವ ಗೌಡರು ಮೊದಲ ಬಾರಿಗೆ ತವರು ಜಿಲ್ಲೆ ಹಾಸನ ಬಿಟ್ಟು ತುಮಕೂರಿನಿಂದ ಸ್ಪರ್ಧಿಸಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.
ಗೌಡರನ್ನು ಇಲ್ಲಿಯೇ ಸೋಲಿಸಲೇಬೇಕೆಂದು ಪಣ ತೊಟ್ಟಿದ ಬಿಜೆಪಿ ಕೂಡ ತನ್ನ ಆಂತರಿಕ ಕಿತ್ತಾಟವನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿದೆ.
ತುಮಕೂರಿನಲ್ಲಿ ದೇವೇಗೌಡರು ಗೆದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ಪರಾಭವಗೊಂಡರೆ ಸರ್ಕಾರದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇಇಲ್ಲ.
ಹಾಸನ:
ಲೋಕೋಪಯೋಗಿ ಸಚಿವ ರೇವಣ್ಣ ಪುತ್ರ ಹಾಗೂ ದೇವೇಗೌಡರ ಮತ್ತೋರ್ವ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆಯಿಂದಾಗಿ ಹಾಸನ ಕೂಡ ಪ್ರತಿಷ್ಠೆಯ ಕಣವಾಗಿದೆ.
ಬಿಜೆಪಿಯಿಂದ ಮಾಜಿ ಸಚಿವ ಎ.ಮಂಜು ಸ್ಪರ್ಧಿಸಿದ್ದಾರೆ. ಪ್ರಜ್ವಲ್ ರೇವಣ್ಣ ದೇವೇಗೌಡರ ಮೊಮ್ಮಗನಾಗಿರುವುದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲೇಬೇಕು. ಫಲಿತಾಂಶ ಏರುಪೇರಾದರೂ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ.
ಚಿಕ್ಕಬಳ್ಳಾಪುರ:
ಎಐಸಿಸಿಯಲ್ಲಿ ತನ್ನದೇ ಅಧಿಪತ್ಯ ಸಾಧಿಸಿರುವ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿದ್ದರು. ಸ್ವಪಕ್ಷೀಯರ ವಿರೋಧದ ನಡುವೆಯೂ ಮೊಯ್ಲಿ ಸ್ಪರ್ಧಿಸಿದ್ದರು. ಅವರ ಎದುರಾಳಿಯಾಗಿ ಕಳೆದ ಬಾರಿ ಕೂದಲೆಳೆ ಅಂತರಿಂದ ಪರಾಭವಗೊಂಡಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಮತ್ತೊಮ್ಮೆ ಸ್ಫರ್ಧಿಸಿದ್ದಾರೆ. ಇಲ್ಲಿ ಮೋದಿ ಪರಾಭವಗೊಂಡರೆ ಜೆಡಿಎಸ್ ಮೇಲೆ ಸಂಶಯ ಮೂಡುತ್ತದೆ.
ಕೋಲಾರ:
ಸೋಲಿಲ್ಲದ ಸರದಾರನೆಂದೇ ಕರೆಯುವ ಕೆ.ಎಚ್.ಮುನಿಯಪ್ಪ ಈ ಬಾರಿ ಹಿಂದೆಂದೂ ಕಾಣದಷ್ಟು ವಿರೋಧವನ್ನು ಕ್ಷೇತ್ರದಲ್ಲಿ ಎದುರಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರೇ ಅವರಿಗೆ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು.
ಕೋಲಾರದಿಂದ ಕೆ.ಎಚ್.ಮುನಿಯಪ್ಪ ಗೆಲ್ಲದಿದ್ದರೆ ಮೈತ್ರಿ ಪಕ್ಷದ ಮೇಲೆ ಸಂಶಯದ ಮುಳ್ಳು ಮೂಡುತ್ತದೆ.
ಕಲಬುರಗಿ:
ಕರ್ನಾಟಕದ ಮಟ್ಟಿಗೆ ಸೋಲಿಲ್ಲದ ಸರದಾರನೆಂದೇ ಖ್ಯಾತಿಯಾಗಿ ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಯನ್ನು ಎದುರಿಸಿದ ಕ್ಷೇತ್ರವೆಂದರೆ ಕಲಬುರಗಿ. ಕಾಂಗ್ರೆಸ್‍ನಿಂದ ಮೂರನೇ ಬಾರಿ ಸ್ಪರ್ಧಿಸಿರುವ ಎಂ.ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ಸೋಲಿಸಲೇಬೇಕೆಂದು ಬಿಜೆಪಿ ಪಣ ತೊಟ್ಟಿತ್ತು.
ಹೀಗಾಗಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಅವರನ್ನು ಕರೆತಂದು ಟಿಕೆಟ್ ನೀಡಿದ್ದು ಇತಿಹಾಸ.
ಕಲಬುರಗಿಯಲ್ಲಿ ಖರ್ಗೆ ಗೆದ್ದರೆ ದೋಸ್ತಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಪರಾಭವಗೊಂಡರೆ ದೊಸ್ತಿಗೆ ಇನ್ನೊಂದು ಕಂಟಕ ಶುರುವಾಗಲಿದೆ.
ಹೀಗೆ ಸಪ್ತ ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗಳು ಗೆದ್ದರೆ ಸರ್ಕಾರ ಸುಭದ್ರ. ಅಪ್ಪಿತಪ್ಪಿಯೂ ಫಲಿತಾಂಶ ಏರುಪೇರಾಗಿ ಬಿಜೆಪಿಯನ್ನು ಕೈ ಹಿಡಿದರೆ 23ರಿಂದ ಆರಂಭವಾಗಲಿರುವ ಭಿನ್ನಮತವನ್ನು ಊಹಿಸಲು ಅಸಾಧ್ಯ.