ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಆರ್‍ಎಸ್‍ಎಸ್‍ಕಟ್ಟಾಳು ಬಿ.ಎಲ್. ಸಂತೋಷ್ ಉನ್ನತ ಸ್ಥಾನಕ್ಕೆ ಏರಲಿದ್ದಾರೆಯೇ?

ಬೆಂಗಳೂರು,ಮೇ6- ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಆರ್‍ಎಸ್‍ಎಸ್‍ ಕಟ್ಟಾಳು ಬಿ.ಎಲ್. ಸಂತೋಷ್ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎಂಬ ಮಾತುಗಳು ರಾಜ್ಯ ಬಿಜೆಪಿ ಮೂಲಗಳಿಂದ ಕೇಳಿ ಬರುತ್ತಿವೆ. ಅದರ ಜತೆಯಲ್ಲೇ ಸಂತೋಷ್ ಆಪ್ತರಿಗೂ ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ ಎಂದೂ ಹೇಳಲಾಗುತ್ತಿದೆ.

ಸಂತೋಷ್ ಪಕ್ಷ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಶಬರಿಮಲೆ ವಿವಾದದ ವಿಚಾರದಲ್ಲಿ ಪಕ್ಷ ಅವರಿಗೆ ಮಹತ್ತರ ಜವಾಬ್ದಾರಿ ನೀಡಿತ್ತು. ಈ ವೇಳೆ ಅವರು ಬಿಜೆಪಿ ಪರ ಹಲವು ಯಶಸ್ವಿ ಕಾರ್ಯಕ್ರಮ ನೀಡಿದ್ದರು. ಅವರ ಕೆಲಸವನ್ನು ಗುರುತಿಸಿರುವ ಬಿಜೆಪಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಒಂದೊಮ್ಮೆ ಬಡ್ತಿ ಸಿಕ್ಕರೆ ಸಂತೋಷ್ ದೆಹಲಿಯಲ್ಲಿ ಕುಳಿತೇ ರಾಜ್ಯ ಬಿಜೆಪಿಯನ್ನು ನಿಯಂತ್ರಣ ಮಾಡುವ ಸಾಧ್ಯತೆ ಇದೆ.

ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆಗೊಳ್ಳಬೇಕಿದೆ. ಹಾಗಾಗಿ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆಗೆ ಹೈಕಮಾಂಡ್ ಗಟ್ಟಿ ನಿರ್ಧಾರ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಸಂತೋಷ್‍ಗೆ ಬಹುದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಸದ್ಯ ರಾಮಲಾಲ್ ಸಂಘಟನಾ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸ್ಥಾನದ ಮೇಲೆ ಬಿ.ಎಲ್. ಸಂತೋಷ್ ಕಣ್ಣಿಟ್ಟಿದ್ದು, ಮತ್ತೆ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೇರಿದರೆ ರಾಮ್‍ಲಾಲ್ ಸ್ಥಾನವನ್ನು ಸಂತೋಷ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಲವರ್ಧನೆಯ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಸಂತೋಷ್ ಅವರಿಗೆ ಉನ್ನತ ಸ್ಥಾನ ನೀಡಲು ಚಿಂತಿಸಿದೆ ಎಂದೂ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ. ಅದರ ಜತೆಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಅವಧಿ ಮುಗಿದು ಆರು ತಿಂಗಳುಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಪ್ರಬಲ ನಾಯಕರು ಈ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ.

ಬಿ.ಎಲ್. ಸಂತೋಷ್ ಸಹ ತಮ್ಮ ಆಪ್ತರಾದ ಸಿ.ಟಿ. ರವಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೆ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅಥವಾ ಗೋವಿಂದ ಕಾರಜೋಳ ಅವರನ್ನು ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ. ಅತ್ತ ಆರ್. ಅಶೋಕ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಆದರೆ ಹೈಕಮಾಂಡ್ ಮಟ್ಟದಲ್ಲಿ ಇತ್ತೀಚೆಗೆ ಬಿ.ಎಲ್. ಸಂತೋಷ್ ಪ್ರಭಾವಿಯಾಗಿ ಬೆಳೆದಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ವೇಳೆ, ಯಡಿಯೂರಪ್ಪ ಅವರ ಮಾತಿಗೆ ಬೆಲೆ ನೀಡದೇ, ಸಿ.ಟಿ. ರವಿ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿದರೆ ಬಿಎಸ್‍ವೈ ಮುಂದಿನ ನಡೆ ಏನಾಗಲಿದೆ ಎಂಬುದು ಇದೀಗ ಪ್ರಶ್ನೆಯಾಗಿ ಉಳಿದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಧಿಕಾರಾವಧಿ ಏ.5ರಂದು ಪೂರ್ಣಗೊಂಡಿದೆ. ಹಾಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೂ ಭಾರಿ ಲಾಬಿ ನಡೆಯುತ್ತಿದೆ. 13 ಆಕಾಂಕ್ಷಿಗಳು ರೇಸ್‍ನಲ್ಲಿದ್ದಾರೆ.

ಪ್ರಬಲ ಜಾತಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆದಿದೆಯಂತೆ. ಒಕ್ಕಲಿಗ ಕೋಟಾದಲ್ಲಿ ಸಿ.ಟಿ ರವಿ, ಆರ್ ಅಶೋಕ್ ಹೆಸರು ಮುನ್ನಲೆಯಲ್ಲಿದೆ. ಸಿ.ಟಿ ರವಿ ಪರ ಬಿ.ಎಲ್ ಸಂತೋಷ್ ಒಲವು ಹೊಂದಿದ್ದಾರೆ. ಸಿ.ಟಿ ರವಿ ರಾಜ್ಯಾಧ್ಯಕ್ಷರಾದರೆ ಪರೋಕ್ಷವಾಗಿ ಬಿ.ಎಲ್ ಸಂತೋಷ್ ಅಧ್ಯಕ್ಷರಾದಂತೆ. ಒಂದು ವೇಳೆ ತಾವು ದೆಹಲಿಯಲ್ಲಿ ಪಕ್ಷದ ಉನ್ನತ ಹುದ್ದೆ ಹೊಂದಿದರೆ, ದೆಹಲಿಯಲ್ಲಿ ಕುಳಿತೇ ರಾಜ್ಯ ಬಿಜೆಪಿಯನ್ನೂ ನಿಯಂತ್ರಿಸಬಹುದು ಎಂಬ ಚಿಂತನೆಯನ್ನು ಬಿ.ಎಲ್.ಸಂತೋಷ್ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ