ಬೆಂಗಳೂರು,ಮೇ6-ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಎರಡಂಕಿಯನ್ನೂ ದಾಟಲು ವಿಫಲವಾಗುವ ಸಮ್ಮಿಶ್ರ ಸರ್ಕಾರ ಮುಂದಿನ ದಿನಗಳಲ್ಲಿ ದೋಸ್ತಿಗಳು ಪುಡಿಪುಡಿಯಾಗಲಿವೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಭವಿಷ್ಯ ನುಡಿದರು.
ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡಂಕಿಯನ್ನು ದಾಟುವುದಿಲ್ಲ. ಫಲಿತಾಂಶ ಪ್ರಕಟಗೊಂಡ ಮೇಲೆ ಉಭಯ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ ಉಂಟಾಗಿ ಹಾದಿಬೀದಿ ರಂಪಾಟ ಪ್ರಾರಂಭವಾಗುತ್ತದೆ. ದೋಸ್ತಿ ಸರ್ಕಾರ ಮಣ್ಣಾಗುವುದರ ಜೊತೆಗೆ ಪುಡಿಪುಡಿಯಾಗಲಿದೆ ಎಂದು ವ್ಯಂಗ್ಯವಾಡಿದರು.
ಗೃಹ ಸಚಿವ ಎಂ.ಬಿ.ಪಾಟೀಲ್ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಮೈಸೂರು ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶೋಕ್, 48 ಸ್ಥಾನದಿಂದ ನಾಲ್ಕು ಸ್ಥಾನಕ್ಕೆ ಕುಸಿಯುವ ಭೀತಿಯಲ್ಲಿರುವ ಕಾಂಗ್ರೆಸ್ ದೇಶದಲ್ಲಿ ಆಡಳಿತ ನಡೆಸುವ ಯೋಗ್ಯತೆಯನ್ನು ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಎರಡು ಅವಧಿಗೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ನಂತರ ಅಧಿಕೃತ ವಿರೋಧ ಪಕ್ಷವಾಗುವಷ್ಟು ಸ್ಥಾನ ಪಡೆಯಲು ವಿಫಲವಾಯಿತು. ಇಂತಹ ಪಕ್ಷ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಆಡಳಿತ ನಡೆಸಲು ನಾಲಾಯಕ್ ಪಕ್ಷವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.
23ರ ಫಲಿತಾಂಶದ ನಂತರ ಸರ್ಕಾರ ಬೀಳುತ್ತದೋ ಇಲ್ಲವೋ ಗೊತ್ತಿಲ್ಲ. ಉಭಯ ಪಕ್ಷಗಳ ಮುಖಂಡರಲ್ಲೇ ಅಪನಂಬಿಕೆ, ಒಬ್ಬರನೊಬ್ಬರು ಸೋಲಿಸುವ ಪೈಪೋಟಿಗೆ ಬಿದ್ದಿದ್ದಾರೆ. ನಾವು ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಅವರಾಗಿಯೇ ಬಿದ್ದು ಹೋಗಲು ಸಿದ್ಧರಾಗಿರುವಾಗ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದರು.
23ರ ನಂತರ ರಾಜ್ಯದಲ್ಲಿ ಏನೂ ಬೇಕಾದರೂ ಆಗಬಹುದು. ಸರ್ಕಾರ ಉಳಿಸಿಕೊಳ್ಳಲು ಈಗಾಗಲೇ ಕಸರತ್ತು ಆರಂಭವಾಗಿದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನೀವು ಮಾಡಿರುವ ಪಾಪಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದವರನ್ನು ಗೃಹಸಚಿವರು ಬಂಧಿಸಲು ಸೂಚಿಸುತ್ತಾರೆ. ಎಂ.ಬಿ.ಪಾಟೀಲ್ ತಮ್ಮನ್ನೇ ತಾವು ಸರ್ವಾಧಿಕಾರಿ ಎಂದುಕೊಂಡಿರಬಹುದು. ಬಹಳ ದಿನಗಳ ಕಾಲ ಇದು ನಡೆಯುವುದಿಲ್ಲ. ನಿಮ್ಮ ವರ್ತನೆಯನ್ನು ಮೊದಲು ತಿದ್ದಿಕೊಳ್ಳಿ ಎಂದರು.
ಪಕ್ಷದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರದ ವಿರುದ್ದ ಮಾತನಾಡಿದವರನ್ನು ಹತ್ತಿಕ್ಕುವ ಕೆಲಸವನ್ನು ಖುದ್ದು ಗೃಹ ಸಚಿವರೇ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನಾವು ಮಾತನಾಡಬಾರದೇ ಎಂದು ಪ್ರಶ್ನಿಸಿದರು.
ಗೃಹಸಚಿವರು ತಮ್ಮ ತಪ್ಪನ್ನು ತಿದ್ದುಕೊಳ್ಳಬೇಕು. ಪತ್ರಕರ್ತರು, ಬಿಜೆಪಿ ಕಾರ್ಯಕರ್ತರನ್ನು ಸುಳ್ಳು ಮೊಕದ್ದಮ್ಮೆಯನ್ನು ಬಂಧಿಸುವ ಹೀನಕೃತ್ಯ ಮಾಡಬಾರದು ಎಂದು ಕೋರಿದರು.
ಪಕ್ಷದ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಇಂದಿರಾಗಾಂಧಿ ಪರಿಸ್ಥಿತಿ ಏನಾಯಿತು ಗೊತ್ತೆ? ಎಂ.ಬಿ.ಪಾಟೀಲ್ ಜೀವನಪೂರ್ತಿ ಗೃಹಸಚಿವರಾಗೇ ಇರುವುದಿಲ್ಲ ಮೇ 23ರ ಬಳಿಕ ನೀವು ಮಾಜಿ ಆಗಲಿದ್ದೀರಿ ಎಂದು ಎಚ್ಚರಿಸಿದರು.
ಪ್ರತ್ಯೇಕ ವೀರಶೈವ ಲಿಂಗಾಯಿತ ವಿಷಯದಲ್ಲಿ ಎಂ.ಬಿ.ಪಾಟೀಲ್ ಒಂದು ಹೇಳಿಕೆ ನೀಡಿದರೆ, ಸಚಿವ ಡಿ.ಕೆ.ಶಿವಕುಮಾರ್ ತದ್ವಿರುದ್ದ ಹೇಳಿಕೆ ನೀಡುತ್ತಾರೆ. ಇಬ್ಬರು ನಾಟಕವಾಡುವುದರಲ್ಲಿ ನಿಸ್ಸೀಮರು. ಈ ನಿಮ್ಮ ನಾಟಕ 23ಕ್ಕೆ ಕೊನೆಗೊಳ್ಳಲಿದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.