ಮೇ29ರಂದು ನಡೆಯಲಿರುವ ಪಾಲಿಕೆ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನ

ಬೆಂಗಳೂರು,ಮೇ6- ಇಬ್ಬರು ಬಿಬಿಎಂಪಿ ಸದಸ್ಯರ ಅಕಾಲಿಕ ನಿಧನದಿಂದ ತೆರವಾಗಿರುವ ಎರಡು ವಾರ್ಡ್‍ಗಳಿಗೆ ಮೇ29ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತೀರ್ಮಾನಿಸಿವೆ.

ಸಣ್ಣ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಏಳುಮಲೈ ಅವರು ನಿಧನರಾಗಿದ್ದ ಹಿನ್ನೆಲೆಯಲ್ಲಿ ಸಗಾಯಿಪುರಂ ವಾರ್ಡ್ ಹಾಗೂ ಹೃದಯಾಘಾತದಿಂದ ರಮೀಳಾ ಉಮಾಶಂಕರ್ ಅವರ ಸಾವಿನಿಂದ ತೆರವಾಗಿದ್ದ ಕಾವೇರಿಪುರ ವಾರ್ಡ್‍ಗೆ 29ರಂದು ಚುನಾವಣೆ ನಡೆಯಲಿದೆ.

198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಬಿಜೆಪಿ 101 ಸಂಖ್ಯಾ ಬಲ ಹೊಂದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಪರಿಣಾಮ ಪಾಲಿಕೆಯಲ್ಲಿ ಆಡಳಿತದ ಗದ್ದುಗೆ ಹಿಡಿಯಲು ಸಾಧ್ಯವಾಗಿರಲಿಲ್ಲ.

ಇದೀಗ ಪಕ್ಷೇತರ ಸದಸ್ಯ ಏಳುಮಲೈ ಹಾಗೂ ಜೆಡಿಎಸ್‍ನ ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿಕೊಳ್ಳುವ ಮೂಲಕ ಸಂಖ್ಯಾಬಲವನ್ನು 103ಕ್ಕೆ ಹೆಚ್ಚಿಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಎರಡು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಈಗಾಗಲೇ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು 5ನೇ ವರ್ಷ ಪೂರ್ಣಗೊಳಿಸಬೇಕಾದರೆ ಈ ಎರಡು ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿವೆ.

ಹೀಗಾಗಿ ಸಗಾಯಿಪುರಂ ಮತ್ತು ಕಾವೇರಿಪುರ ವಾರ್ಡ್‍ನಲ್ಲೂ ಮೈತ್ರಿ ಮುಂದುವರೆಸಲು ಉಭಯ ಪಕ್ಷಗಳ ನಾಯಕರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾವೇರಿಪುರ ವಾರ್ಡ್‍ನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು ಸಗಾಯಿಪುರಂ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಸಗಾಯಿಪುರಂ ವಾರ್ಡ್‍ನಿಂದ ಏಳುಮಲೈ ಅವರ ಸಂಬಂಧಿಕರಿಗೆ ಕೈ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಅದೇ ರೀತಿ ಕಾವೇರಿಪುರ ವಾರ್ಡ್‍ನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ