ಬೇಲೂರು, ಮೇ 4- ಪಟ್ಟಣದಲ್ಲಿ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ನೇತೃತ್ವದ ತಂಡ, ಕಸಾಯಿ ಖಾನೆಗಳಲ್ಲಿದ್ದ ಗೋಮಾಂಸ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆದು, ಬೀಗ ಜಡಿದು ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಗೋಮಾಂಸದ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್, ಪಟ್ಟಣದಲ್ಲಿ ಅವ್ಯಾಹತವಾಗಿ ಕಸಾಯಿ ಖಾನೆಗಳನ್ನು ಕೆಲವರು ನಡೆಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ದಾಳಿನಡೆಸಿ ಗೋಮಾಂಸ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ.
ಈಗ ವಶಕ್ಕೆ ಪಡೆದಿರುವ ಗೋಮಾಂಸವನ್ನು ನಮ್ಮ ಘನತ್ಯಾಜ್ಯ ಘಟಕದಲ್ಲಿ ಗುಂಡಿ ತೆಗೆದು ವಾಸನೆ ಬರದಂತೆ ಹೂಳಲಾಗುವುದು. ಗೋಮಾಂಸ ಮಾರಾಟದ ಅಂಗಡಿ ಮಳಿಗೆಗಳನ್ನು ಸೀಜ್ ಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತೆ ಕಸಾಯಿ ಖಾನೆ ತೆರೆದು ಮಾಂಸ ಮಾರಾಟ ಮಾಡಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸ್ಗೆ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯಾಧಿಕಾರಿ ವೆಂಕಟೇಶ್, ಮಧುಸೂದನ್, ಕಂದಾಯಾಧಿಕಾರಿ ಬಸವರಾಜ್ ಸಿಗ್ಗಾವಿ, ಆದಿ ನಾರಾಯಣ್, ಜಯರಾಮ್, ನಾಗರಾಜ್ ಹಾಗೂ ಪೊಲೀಸರಿದ್ದರು.