ಹಾಸನ, ಮೇ 4- ಟ್ಯಾಟೂ ಕಲಾವಿದನಾದ ಹಾಸನದ ಪೋಟೋಗ್ರಾಫರ್ ತನ್ನ ಪೋಟೋ ಸ್ಟುಡಿಯೋದಲ್ಲೇ ಖೋಟಾನೋಟು ತಯಾರಿಸುತ್ತಾ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿ ಕಿರಣ್ಕುಮಾರ್ ಇದುವರೆಗೂ ಎಷ್ಟು ಖೋಟಾನೋಟುಗಳನ್ನು ಚಲಾಯಿಸಿದ್ದಾನೆಂಬ ಬಗ್ಗೆ ಚನ್ನರಾಯಪಟ್ಟಣ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈತನ ಸ್ಟುಡಿಯೋದಲ್ಲಿ ಖೋಟಾನೋಟು ತಯಾರಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಚನ್ನರಾಯಪಟ್ಟಣದ ನವೋದಯ ಕಾಲೇಜು ಹಿಂಭಾಗದ ಸ್ಟುಡಿಯೋ ಮೇಲೆ ಪೊಲೀಸರು ದಾಳಿ ಮಾಡಿದ್ದರು.
ದಾಳಿ ವೇಳೆ ಪೋಟೋಸ್ಟುಡಿಯೋ ಹಾಗೂ ಮನೆಯಲ್ಲಿದ್ದ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮಗನನ್ನು ಖೋಟಾನೋಟು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕಿರಣ್ಕುಮಾರ್ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.
ಇವರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.ಅಂತೂ ಒಬ್ಬ ಪೋಟೋಗ್ರಾಫರ್ ಪೋಟೋ ತೆಗೆಯುವ ಮೂಲಕ ಲಕ್ಷ ಲಕ್ಷ ಖೋಟಾನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ.
ಈ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ಆರೋಪಿ ಕಿರಣ್ಕುಮಾರ್ ಎಷ್ಟು ದಿನಗಳಿಂದ ಖೋಟಾನೋಟು ತಯಾರಿಸುತ್ತಿದ್ದ, ಇದುವರೆಗೂ ಎಷ್ಟು ಖೋಟಾನೋಟು ಚಲಾವಣೆ ಮಾಡಿದ್ದಾನೆ. ಈತನ ಹಿಂದೆ ಇನ್ನೂ ಯಾರ್ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.