ಒಂದೆಡೆ ಉಪಚುನಾವಣೆಯ ಕಾವು ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ

ಕಲಬುರಗಿ, ಮೇ 4- ಒಂದೆಡೆ ಉಪಚುನಾವಣೆಯ ಕಾವು, ಪ್ರಚಾರದ ಅಬ್ಬರ.ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ.

ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದರೆ ಇತ್ತ ಜನ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಗಾಗಿ ಪರಿತಪಿಸುತ್ತಿದ್ದಾರೆ. ಕೆಲಸವಿಲ್ಲದೆ ಕೂಲಿಗಾಗಿ ಗುಳೆ ಹೋಗುತ್ತಿದ್ದಾರೆ. ಮಕ್ಕಳು ಮರಿಗಳೊಂದಿಗೆ ಬಟ್ಟೆ ಬರೆಗಳನ್ನು ತೆಗೆದುಕೊಂಡು ಕೂಲಿ ಅರಸಿ ಹೊರಡುತ್ತಿದ್ದಾರೆ.

ಇತ್ತ ಚಿಂಚೋಳಿಯಲ್ಲಿ ಮಾತ್ರ ಚುನಾವಣೆ ಕಾವು ಜೋರಾಗಿ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಭಾರೀ ಸಮಾವೇಶ, ಬೃಹತ್ ರ್ಯಾಲಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಗುತ್ತಿದೆ. ಜನರ ಸಮಸ್ಯೆಯನ್ನು ಕೇಳುವವರು ಯಾರು? ಬರದಿಂದ ಜನ ತತ್ತರಿಸಿದ್ದಾರೆ. ಕನಿಷ್ಠ ಕುಡಿಯುವ ನೀರನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಹಲವೆಡೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಇನ್ನುಳಿದಂತೆ ಕುಡಿಯುವ ನೀರು ಪಡೆಯಲು ಜನರು ಕಿಲೋ ಮೀಟರ್‍ಗಟ್ಟಲೇ ಹೋಗಬೇಕಾಗಿದೆ.

ಚಿಂಚೋಳಿ ಕ್ಷೇತ್ರದ ರುಮ್ಮನಗುಡ ತಾಂಡಾದ ಜನ ಹನಿ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ತಾಂಡಾದ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ರುಮ್ಮನಗುಡ ಗ್ರಾಮದ ಬಾವಿ ಹಾಗೂ ಬೋರ್ ಗಳು ಬತ್ತಿ ಹೋಗಿವೆ. ಅಲ್ಲದೆ ಗ್ರಾಮದ ಹೊರವಲಯದ ಬಾವಿಯಲ್ಲಿ ಬರುವ ಬೊಗಸೆ ನೀರಿಗಾಗಿ ಜೀವದ ಹಂಗು ತೊರೆದು ಜನ ಬಾವಿಗೆ ಇಳಿಯುತ್ತಿದ್ದಾರೆ.

ಒಂದೆಡೆ ಸುಡು ಬಿಸಿಲು ಇನ್ನೊಂದೆಡೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಈ ಬಾರಿ ಉಪಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ಮತಯಂತ್ರ ತಂದರೆ ಒಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ