
ಬೆಂಗಳೂರು, ಮೇ 4- ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಜನನಿಬಿಡ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸುನಿಲ್ಕುಮಾರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯಂತೆ ನಗರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆದರೆ ಹೈ ಅಲರ್ಟ್ ಘೋಷಣೆ ಮಾಡಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈಗಾಗಲೇ ನಗರದಲ್ಲಿರುವ ವಿವಿಧ ಧಾರ್ಮಿಕ ಮುಖಂಡರ ಜತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉಗ್ರ ಸಂಘಟನೆಗಳ ಚಟುವಟಿಕೆ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಿದ್ದೇವೆ ಎಂದರು.
ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ಗಳು ಹಾಗೂ ಎಸಿಪಿಗಳು ಜನರಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸುನಿಲ್ಕುಮಾರ್ ಹೇಳಿದರು.
ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು , ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದ್ದು , ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ವಿವರಿಸಿದರು.