ಬೆಂಗಳೂರು: ಸರಕಾರಿ ಅಧಿಕಾರಿಗಳೊಂದಿಗೆ ಸೇರಿ ಭಾರೀ ಅಕ್ರಮಗಳನ್ನ ಎಸಗಿದ ಆರೋಪವಿರುವ ವಾಲ್ ಮಾರ್ಕ್ ಸೇರಿದಂತೆ ಐದು ಕಂಪನಿಗಳ ಮೇಲೆ ಇವತ್ತು ಎಸಿಬಿ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಕಂಪನಿಯಾದ ವಾಲ್ ಮಾರ್ಕ್ ಸಂಸ್ಥೆ ಬಿಬಿಎಂಪಿ ಮತ್ತು ಬಿಡಿಎಯಿಂದ ಅಕ್ರಮವಾಗಿ ಟಿಡಿಆರ್ ಗಳಿಸಿದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಎಸಿಪಿ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳ ನೇತೃತ್ವದ ಐದು ಎಸಿಬಿ ತಂಡಗಳು ಏಕಾಏಕಿ ದಾಳಿ ನಡೆಸಿವೆ.
ವಾಲ್ಮಾರ್ಕ್ ಮಾಲೀಕ ರತನ್ ಲಾಲ್ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿಯಾಗಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ರತನ್ ಲಾಲ್ ಮನೆ ಹಾಗೂ ರೆಸಿಡೆನ್ಸಿ ರಸ್ತೆಯಲ್ಲಿರುವ ಅವರ ಕಚೇರಿ ಮೇಲೆ ಎಸಿಬಿ ತಂಡ ರೇಡ್ ಮಾಡಿದೆ. ಆದರೆ, ಎಸಿಬಿ ದಾಳಿಯ ಸೂಚನೆ ಮೊದಲೇ ಅರಿತಂತಿದ್ದ ರತನ್ ಲಾಲ್ ಸ್ಥಳದಲ್ಲಿ ಕಾಣಿಸಿಲ್ಲ. ಆತ ಪರಾರಿಯಾಗಿರುವ ಸಾಧ್ಯತೆ ಇದೆ. ಆದರೆ, ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರತನ್ ಲಾಲ್ ಮನೆ ಮತ್ತು ಕಚೇರಿಯಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಹಾಗೆಯೇ, ವಾಲ್ಮಾರ್ಕ್ ಕಂಪನಿಯ ಏಜೆಂಟ್ಗಳಾದ ಅಮಿತ್ ಬಲಾರಾ, ಮುನಿರಾಜು ಮತ್ತು ಗೌತಮ್ ಎಂಬುವವರ ಮನೆಗಳ ಮೇಲೂ ಎಸಿಬಿ ದಾಳಿ ನಡೆಸಿದೆ.
ಮುನಿರಾಜು ಮತ್ತು ಗೌತಮ್ ಅವರ ಮನೆ ರಾಮಮೂರ್ತಿನಗರದಲ್ಲಿದೆ. ಅಮಿತ್ ಬಲಾರಾ ಅವರ ಮನೆ ಇಂದಿರಾ ನಗರದಲ್ಲಿದೆ. ಇವರ ಮನೆಗಳಲ್ಲಿ ಟಿಡಿಆರ್ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ.
ಏನಿದು ಟಿಡಿಆರ್ ಅಕ್ರಮ?
ರಿಯಲ್ ಎಸ್ಟೇಟ್ ಕಂಪನಿಯಾದ ವಾಲ್ಮಾರ್ಕ್ ಬಿಡಿಎ ಮತ್ತು ಬಿಬಿಎಂಪಿ ಸಂಸ್ಥೆಗಳಿಂದ ಅಕ್ರಮವಾಗಿ ಟಿಡಿಆರ್ ಪಡೆದಿತ್ತು. ಇದರ ಹಿಂದೆ ಬಿಡಿಎ ಮತ್ತು ಬಿಬಿಎಂಪಿಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ತಿಳಿದುಬಂದಿದೆ. ಕೋಟ್ಯಂತರ ಮೌಲ್ಯದ ಸರಕಾರಿ ಆಸ್ತಿ, ಜಮೀನನ್ನು ವಾಲ್ಮಾರ್ಕ್ಗೆ ಸಿಗುವಂತೆ ಈ ಅಧಿಕಾರಿಗಳು ನೋಡಿಕೊಂಡಿದ್ದರು. ಅದಕ್ಕೆ ಕಮಿಷನ್ ಕೂಡ ಪಡೆದಿದ್ದಾರೆ. ಈ ಸಂಬಂಧ ಬಿಡಿಎ ಎಇಇ ಕೃಷ್ಣಲಾಲ್ ಅವರ ಮನೆ ಮೇಲೆ ಏಪ್ರಿಲ್ 26ರಂದು ಎಸಿಬಿ ದಾಳಿ ಮಾಡಿತ್ತು.
ಅದಾದ ಬಳಿಕ ರತನ್ ಲಾಲ್ ಅವರು ತಮ್ಮ ಮೇಲೂ ದಾಳಿಯಾಗುವ ಸಾಧ್ಯತೆಯನ್ನು ಅರಿತು ಎಲ್ಲಾ ದಾಖಲೆಗಳನ್ನು ರಹಸ್ಯಸ್ಥಳದಲ್ಲಿ ಬಂದೋಬಸ್ತ್ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, ಎಸಿಬಿ ಅಧಿಕಾರಿಗಳಿಗೆ ರತನ್ ಲಾಲ್ ಮನೆಯಲ್ಲಿ ದಾಖಲೆಗಳು ಸಿಗುವ ಸಂಭವ ಕಡಿಮೆ ಇದೆ. ಆದರೆ, ವಾಲ್ಮಾರ್ಕ್ ಕಂಪನಿಯ ಏಜೆಂಟ್ಗಳ ಮನೆಗಳಲ್ಲಿ ಸೂಕ್ತ ದಾಖಲೆಗಳು ಸಿಗುವ ನಿರೀಕ್ಷೆಯಲ್ಲಿ ಅಲ್ಲಿಯೂ ದಾಳಿ ಮಾಡಲಾಗಿದೆ.