ಬೆಂಗಳೂರು,ಮೇ3- ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ರೆಸ್ನಲ್ಲಿ ನಾನಿಲ್ಲ. ನಾನು ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿದ್ದು ಮತ್ತೆ ಸಂಸದೆಯಾಗಿಯೂ ಗೆದ್ದುಬರುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಚಿತ್ರಕಲಾ ಪರಿಷತ್ನಲ್ಲಿ ಇಂದಿನಿಂದ ಆರಂಭವಾದ ಬೆಂಗಳೂರು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವ್ಯಾರು ರಾಜ್ಯಾಧ್ಯಕ್ಷರ ರೇಸ್ನಲ್ಲಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಅದನ್ನು ನಿರ್ಧರಿಸುತ್ತಾರೆ ಎಂದರು.
ನಮ್ಮ ಸಂಘಟನೆಯಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ಮೂರು ವರ್ಷಗಳ ಹಿಂದೆ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಆಯ್ಕೆಯಾಗಿದ್ದರು. ಈಗ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಸಹಜವಾಗಿ ಬದಲಾವಣೆ ಆಗುತ್ತದೆ ಎಂದರು.
ಕೇಂದ್ರ ರಕ್ಷಣಾ ಇಲಾಖೆ ಸುವರ್ಣ ತ್ರಿಭುಜ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಗೆ ಅಭಿನಂದನೆ ಸಲ್ಲಿಸುವೆ. ಮೀನುಗಾರರ ಜೊತೆಯಲ್ಲಿ ಹೋಗಿ ನೌಕಾ ಇಲಾಖೆ ಬೋಟ್ನ್ನು ಪತ್ತೆ ಮಾಡಿದೆ. ಹೀಗಾಗಿ ರಕ್ಷಣಾ ಸಚಿವರು ಹಾಗೂ ಪ್ರಧಾನಿ ಮೋದಿ ಅವರಿಗೆ ಅಭಿನಂದಿಸುವೆ ಎಂದರು.
ಮೀನುಗಾರರ ನಾಪತ್ತೆಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದೆ ಎಂದ ಅವರು, ನಾನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿರ್ಮಲ ಸೀತಾರಾಮನ್ ಅವರನ್ನು ಕರೆಸಿದ್ದು, ಅವರನ್ನು ಮೀನುಗಾರರ ಮನೆಗಳಿಗೂ ಕರೆದೊಯ್ದಿದ್ದೆ ಎಂದು ತಿಳಿಸಿದರು.
ಸುಮಲತ ಗೆದ್ದರೆ ಸಂತೋಷ:
ಮಂಡ್ಯದಲ್ಲಿ ಸುಮಲತ ಅವರಿಗೆ ಎಲ್ಲರೂ ಬೆಂಬಲ ನೀಡಿ ಅವರು ಗೆದ್ದರೆ ಸಂತೋಷ. ಅಂಬರೀಶ್ ತೀರಿಕೊಂಡಾಗ ಅವರ ಕುಟುಂಬದವರ ಜೊತೆ ನಾವಿದ್ದೇವೆ ಎಂದು ಕೆಲವರು ತೋರಿಕೆ ಮಾತನಾಡಿದ್ದಾರೆ. ಆದರೆ ಸುಮಲತ ರಾಜಕಾರಣಕ್ಕೆ ಬರಬೇಕು ಎಂದು ಮನಸ್ಸು ಮಾಡಿದಾಗ ಅವಕಾಶ ಕೊಡದೆ ಕೇವಲ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿತ್ತು. ಆದರೆ ಮಂಡ್ಯ ಜನ ಅದಕ್ಕೆ ಸಡ್ಡುಹೊಡೆದಿದ್ದಾರೆ ಎಂದರು.
ಭರ್ಜರಿ ಶಾಪಿಂಗ್:
ಕಾರ್ಯಕ್ರಮ ಉದ್ಘಾಟಿಸಿದ ನಂತರ ಕರಕುಶಲ ವಸ್ತುಗಳು, ಸೀರೆ ಮಳಿಗೆಗಳನ್ನು ವೀಕ್ಷಿಸಿದ ಶೋಭಾ ಕರಂದ್ಲಾಜೆ ಶಾಪಿಂಗ್ನಲ್ಲೂ ಬ್ಯುಸಿಯಾದರು. ಚೌಕಸಿ ಮಾಡಿ ಸೀರೆಯನ್ನು ಖರೀದಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಲ್.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.