ಬ್ಯಾಂಕಾಕ್: ಸಹೋದ್ಯೋಗಿ, ಸಹಪಾಠಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಥೈಲ್ಯಾಂಡ್ ರಾಜ ತಮ್ಮ ಅಂಗರಕ್ಷಕಿಯನ್ನೇ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆ ಬಾಡಿಗಾರ್ಡ್ಗೆ ರಾಣಿ ಪಟ್ಟ ನೀಡಿದ್ದಾರೆ.
66 ವರ್ಷದ ವಜಿರಲೊಂಗ್ಕಾರ್ನ್ ಥೈಲ್ಯಾಂಡ್ನ ರಾಜ. ಇವರ ತಂದೆ 2016ರಲ್ಲಿ ಮೃತಪಟ್ಟಿದ್ದರು. ಇದಾದ ನಂತರ ವಜಿರಲೊಂಗ್ಕಾರ್ನ್ಗೆ ರಾಜನ ಪಟ್ಟ ನೀಡಲಾಗಿತ್ತು. ಈಗಾಗಲೇ ವಜಿರಲೊಂಗ್ಕಾರ್ನ್ ಮೂರು ಮದುವೆ ಆಗಿದ್ದು, ಎಲ್ಲರಿಗೂ ವಿಚ್ಛೇದನ ನೀಡಿದ್ದಾರೆ. ಅಷ್ಟೇ ಅಲ್ಲ ಈ ರಾಜನಿಗೆ 7 ಮಕ್ಕಳಿದ್ದಾರೆ. ಈಗ ನಾಲ್ಕನೇ ಪತ್ನಿಯಾಗಿ ಬಾಡಿಗಾರ್ಡ್ ಅನ್ನು ಮದುವೆಯಾಗಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, “ಜನರಲ್ ಸುಥಿದಾ ಅವರನ್ನು ವಜಿರಲೊಂಗ್ಕಾರ್ನ್ ವಿವಾಹವಾಗುತ್ತಿದ್ದಾರೆ. ಈ ಮೂಲಕ ಅವರಿಗೆ ರಾಣಿ ಪಟ್ಟ ನೀಡುತ್ತಿದ್ದಾರೆ” ಎಂದು ತಿಳಿಸಲಾಗಿದೆ.
ಈ ಮೊದಲು ಇವರು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ, ತಮ್ಮ ಸಂಬಂಧದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ.
2014ರಲ್ಲಿ ವಜಿರಲೊಂಗ್ಕಾರ್ನ್ ಭದ್ರತಾ ಕೆಲಸಕ್ಕೆ ಸುಥಿದಾ ಅವರನ್ನು ನೇಮಕ ಮಾಡಿಕೊಂಡಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆತಿತ್ತು.