ಬೆಂಗಳೂರು,ಮೇ1-ಹಿರಿಯ ಮುತ್ಸದ್ಧಿ , ಕೇಂದ್ರದ ಮಾಜಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬಲದಿಂದಾಗಿ ರಾಜ್ಯ ರಾಜಕಾರಣದಲ್ಲಿ ಸದ್ಯದಲ್ಲೇ ಭಾರೀ ಬದಲಾವಣೆಯಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಎಸ್.ಎಂ.ಕೃಷ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಡಾಲರ್ಸ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಅತ್ಯಂತ ಹಿರಿಯ ರಾಜಕಾರಣಿ. ಅಪಾರ ರಾಜಕೀಯ ಅನುಭವವುಳ್ಳವರು.ಅವರ ಬಲದಿಂದಾಗಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಅವರು ರಾಜ್ಯದ ನಾನಾ ಕಡೆ ನಮ್ಮ ಪಕ್ಷದ ಪರ ಪ್ರಚಾರ ನಡೆಸಿದ್ದರಿಂದ ನಮಗೆ ಹೆಚ್ಚಿನ ಬಲ ಬಂದಿತು. ಇಂತಹ ಇಳಿವಯಸ್ಸಿನಲ್ಲೂ ಪಾದರಸದಂತೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದನ್ನು ನೋಡಿ ನನಗೆ ಒಂದು ಕ್ಷಣ ಅಚ್ಚರಿಯಾಯಿತು.
ರಾಜ್ಯದಲ್ಲಿ ನಾವು ಈ ಬಾರಿ 22 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ದೇಶದಲ್ಲಿ ಬಿಜೆಪಿ ಒಂದೇ 290ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯಕ್ಕೆ ಇನ್ನು ಎಸ್.ಎಂ.ಕೃಷ್ಣ ಅವರ ಸೇವೆ ಅತ್ಯಗತ್ಯ. ಅವರು ನೂರ್ಕಾಲ ಬದುಕಬೇಕೆಂಬುದು ನಮ್ಮೆಲ್ಲರ ಆಸೆ. ದೇವರು ಇನ್ನಷ್ಟು ಆರೋಗ್ಯ, ಆಯಸ್ಸನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಬಿಎಸ್ವೈ ಹೇಳಿದರು.
ನಿರೀಕ್ಷೆ ಮಾಡಿರಲಿಲ್ಲ:
ನನ್ನ ಹುಟ್ಟುಹಬ್ಬಕ್ಕೆ ಯಡಿಯೂರಪ್ಪನವರು ಬಂದು ಶುಭಕೋರುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಸಾಮಾನ್ಯವಾಗಿ ಅವರು ಹುಟ್ಟುಹಬ್ಬದ ದಿನದಂದು ಬೆಂಗಳೂರಿನಲ್ಲಿ ಇರುತ್ತಿರಲಿಲ್ಲ. ಇಂದು ಖುದ್ದು ನನ್ನ ಮನೆಗೆ ಬಂದು ಶುಭ ಕೋರಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಎಸ್.ಎಂ.ಕೃಷ್ಣ ಹರ್ಷ ವ್ಯಕ್ತಪಡಿಸಿದರು.
ಎಲ್ಲರ ಆಶೀರ್ವಾದದ ಫಲದಿಂದಾಗಿ ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಕಾಲ ಸೇವೆ ಸಲ್ಲಿಸಬೇಕೆಂಬ ಇಂಗಿತವಿದೆ. ಬಿಜೆಪಿ ಪರವಾಗಿ ನಾನು ಮತ್ತಷ್ಟು ಸೇವೆ ಸಲ್ಲಿಸಬೇಕೆಂಬ ಉತ್ಸುಕತೆ ಇಟ್ಟುಕೊಂಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಸಕ್ರಿಯನಾಗಿ ಪಕ್ಷದ ಪರ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನೇನು ಬದಲಾವಣೆಯಾಗುತ್ತದೆ ಎಂಬುದನ್ನು ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಸೂಚ್ಯವಾಗಿ ಹೇಳಿದರು.
ಈ ವೇಳೆ ಮುಖಂಡರಾದ ಆರ್. ಅಶೋಕ್ , ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಎ.ಎಚ್.ಆನಂದ್ ಮತ್ತಿತರರು ಉಪಸ್ಥಿತರಿದ್ದರು.