ಬೆಂಗಳೂರು, ಮೇ 1- ಸಿರಿಧಾನ್ಯಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣ ಕುಟುಂಬ ಹಾಗೂ ಗ್ರಾಮೀಣ ನ್ಯಾಚುರಲ್ ಸಂಸ್ಥೆ ಪ್ರತಿ ವರ್ಷದಂತೆ ಈ ಬಾರಿಯು ಮೇ ಮೂರರಿಂದ ಐದರವರೆಗೆ ಮೂರು ದಿನಗಳ ಕಾಲ ಲಾಲ್‍ಬಾಗ್‍ನ ಡಾ.ಮರಿಗೌಡ ಮೆಮೋರಿಯಲ್ ಹಾಲ್‍ನಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಕುಟುಂಬ ಸಂಸ್ಥೆ ಸಂಸ್ಥಾಪಕ ಎಂ.ಹೆಚ್.ಶ್ರೀಧರ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಆಹಾರ ಪದ್ಧತಿಯಿಂದ ಅನಾರೋಗ್ಯ ಹೆಚ್ಚಾಗಿದ್ದು, ನಗರದಲ್ಲಿ ರೋಗಗಳು ಮನೆ ಮಾಡಿವೆ ಎಂದರು.
ಕಳೆದ ಏಳು ವರ್ಷಗಳಿಂದ ಹಲವು ಧ್ಯೇಯಗಳನ್ನಿಟ್ಟುಕೊಂಡು ಗ್ರಾಮೀಣ ಸಂಸ್ಥೆ ಬೆಂಗಳೂರು ನಗರದ ನಿವಾಸಿಗಳಿಗೆ ಸಾವಯವ ಸಿರಿಧ್ಯಾನ ಮತ್ತು ಆಹಾರ ಮೇಳ ಆಯೋಜಿಸುತ್ತ ಬಂದಿದೆ ಎಂದು ಹೇಳಿದರು.
ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವಾಗಿ ಸಿರಿಧ್ಯಾನಗಳನ್ನು ನೀಡಬೇಕು.ಅಲ್ಲದೆ, ಸರ್ಕಾರಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಿರಿಧ್ಯಾನಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ರೀತಿ ಮಾಡುವುದರಿಂದ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ನರ ದೌರ್ಬಲ್ಯ ಸಮಸ್ಯೆಗಳನ್ನು ತಪ್ಪಿಸಬಹುದಾಗಿ ಎಂದು ತಿಳಿಸಿದರು.
ಮೇ 3ರಂದು ಬೆಳಗೆ ್ಗ11ಕ್ಕೆ 8 ಮಂದಿ ಸಿರಿಧಾನ್ಯ ಬೆಳೆದ ರೈತರಿಗೆ ಸನ್ಮಾನ ಮಾಡಲಾಗುತ್ತದೆ.ಮೇ 4ರಂದು ಬೆಳಗ್ಗೆ 11ಕ್ಕೆ ಸಿರಿಧಾನ್ಯ ಹಾಗೂ ಕಾಡು ಮತ್ತು ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತದೆ.ಮಧ್ಯಾಹ್ನ 2.30ಕ್ಕೆ ಮಹಿಳೆಯರಿಗೆ ಸಿರಿಧಾನ್ಯ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ.
ಕೊನೆ ದಿನ (ಮೇ 5ರಂದು) ಬೆಳಗ್ಗೆ 11ಗಂಟೆಗೆ ಡಾ.ಖಾದರ್ ಅವರು ಸಿರಿಧಾನ್ಯಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪರಿಸರ ತಜ್ಞ ಡಾ. ನಾಗೇಶ್ ಹೆಗಡೆ ಭಾಗವಹಿಸಲಿದ್ದು, ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಶಿಧರ್, ಜಗನ್ನಾಥ್, ಬಾಲಾಜಿ ಹಾಗೂ ಅರುಣ್ ಪ್ರಸನ್ನ ಮತ್ತಿತರರಿದ್ದರು.