ಕುಣಿಗಲ್, ಏ.30- ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಮಹಾವೀರ ನಗರದಲ್ಲಿ ಇಂದು ನಡೆದಿದೆ.
ಗಂಗಲಕ್ಷ್ಮಿ (19) ಆತ್ಮಹತ್ಯೆ ಮಾಡಿಕೊಂಡಿರುವ ನವ ವಿವಾಹಿತೆ.
ಈಕೆಯನ್ನು ತಾಲ್ಲೂಕಿನ ಕೊಟ್ಟಗೆರೆ ಹೋಬಳಿ, ಗುನ್ನಾಗೆರೆ ಗ್ರಾಮದವರಾಗಿದ್ದು, ಮಾರ್ಚ್ 3ರಂದು ಪಟ್ಟಣದ ಮಹಾವೀರ ನಗರದ ವೆಂಕಟೇಶ್ ಎಂಬುವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಪತಿ ವೆಂಕಟೇಶ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಗಂಗಲಕ್ಷ್ಮಿ ಮದುವೆಯಾದ ದಿನದಿಂದಲೂ ಪತಿಯೊಂದಿಗೆ ಅನ್ಯೂನ್ಯವಾಗಿರಲಿಲ್ಲ. ಸಣ್ಣಪುಟ್ಟ ವಿಷಯಕ್ಕೂ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
ನಿನ್ನೆ ಮಧ್ಯರಾತ್ರಿವರೆಗೂ ಪತಿ-ಪತ್ನಿ ನಡುವೆ ಜಗಳವಾಗಿತ್ತು. ಬೆಳಗ್ಗೆ ಎಂದಿನಂತೆ ಪತಿ ವೆಂಕಟೇಶ್ ಕೆಲಸಕ್ಕೆ ಹೋಗಿದ್ದಾಗ ಈಕೆ ಮನೆಯಲ್ಲಿದ್ದ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತಿ ತಿಂಡಿ ತಿನ್ನಲು ಮನೆಗೆ ಹೋದಾಗ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲುತ್ತಿದ್ದಾರೆ.