ಹೇಮಂತ್ ಕರ್ಕರೆ ಎಟಿಎಸ್​ ಮುಖ್ಯಸ್ಥರಾಗಿ ನಿರ್ವಹಿಸಿದ್ದ ಕಾರ್ಯದ ಬಗ್ಗೆ ಹಲವು ಅನುಮಾನವಿದೆ: ಸ್ಪೀಕರ್ ಸುಮಿತ್ರಾ ಮಹಾಜನ್

ನವದೆಹಲಿ: ಹೇಮಂತ್​ ಕರ್ಕರೆಯವರು ಹುತಾತ್ಮರಾಗಿದ್ದಾರೆ ಎಂದು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಅವರು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಆದರೆ, ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್​)ದ ಮುಖ್ಯಸ್ಥರಾಗಿ ಅವರು ನಿರ್ವಹಿಸಿದ್ದ ಕಾರ್ಯದ ಬಗ್ಗೆ ಹಲವು ಅನುಮಾನವಿದೆ ಎಂದು ಹೇಳುವ ಮೂಲಕ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಪೊಲೀಸ್​ ಅಧಿಕಾರಿಯಾಗಿ ಕರ್ಕರೆ ಅವರು ಕಾರ್ಯನಿರ್ವಹಿಸಿದ ವೈಖರಿ ಸರಿಯಿಲ್ಲವೆಂದಾಗ, ಅದು ಸರಿಯಲ್ಲ ಎಂದೇ ನಾವು ಹೇಳಬೇಕಾಗುತ್ತದೆ ಎಂದಿದ್ದಾರೆ.

ಅದಲ್ಲದೆ, ಕಾಂಗ್ರೆಸ್​ ಮುಖಂಡ, ಭೋಪಾಲ್​ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ ಸಿಂಗ್​ ಅವರಿಗೆ ಹೇಮಂತ್​ ಕರ್ಕರೆ ತುಂಬ ಆಪ್ತರಾಗಿದ್ದರು ಎಂಬುದನ್ನು ನಾನು ಕೇಳಿದ್ದೇನೆ. ಆದರೆ, ನನ್ನ ಬಳಿ ಇದಕ್ಕೆ ಪುರಾವೆ ಇಲ್ಲ. ದಿಗ್ವಿಜಯ ಸಿಂಗ್​ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಆರ್​ಎಸ್​ಎಸ್​ ಅನ್ನು ಉಗ್ರ ಸಂಘಟನೆ ಎಂದೇ ಬಿಂಬಿಸಿ, ಅದು ಬಾಂಬ್​ ತಯಾರಿಸುತ್ತದೆ ಎಂದಿದ್ದರು. ಅವರ ಆಗ್ರಹ, ಸೂಚನೆ ಮೇರೆಗೇ ಇಂಧೋರ್​ನಲ್ಲಿ ಹಲವರನ್ನು ಮಹಾರಾಷ್ಟ್ರ ಎಟಿಎಸ್​ ಬಂಧಿಸಿತ್ತು ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಭೋಪಾಲ್​ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರು ಹುತಾತ್ಮ ಅಧಿಕಾರಿ ಹೇಮಂತ್​ ಕರ್ಕರೆಯವರಿಗೆ ನಾನು ಶಾಪಕೊಟ್ಟಿದ್ದಕ್ಕೇ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಈಗ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

If Hemant Karkare’s Role as Police Officer Was ‘Not Correct’, We Will Say So: Sumitra Mahajan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ