ನವದೆಹಲಿ: ಹೇಮಂತ್ ಕರ್ಕರೆಯವರು ಹುತಾತ್ಮರಾಗಿದ್ದಾರೆ ಎಂದು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಅವರು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಆದರೆ, ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್)ದ ಮುಖ್ಯಸ್ಥರಾಗಿ ಅವರು ನಿರ್ವಹಿಸಿದ್ದ ಕಾರ್ಯದ ಬಗ್ಗೆ ಹಲವು ಅನುಮಾನವಿದೆ ಎಂದು ಹೇಳುವ ಮೂಲಕ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಪೊಲೀಸ್ ಅಧಿಕಾರಿಯಾಗಿ ಕರ್ಕರೆ ಅವರು ಕಾರ್ಯನಿರ್ವಹಿಸಿದ ವೈಖರಿ ಸರಿಯಿಲ್ಲವೆಂದಾಗ, ಅದು ಸರಿಯಲ್ಲ ಎಂದೇ ನಾವು ಹೇಳಬೇಕಾಗುತ್ತದೆ ಎಂದಿದ್ದಾರೆ.
ಅದಲ್ಲದೆ, ಕಾಂಗ್ರೆಸ್ ಮುಖಂಡ, ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ ಸಿಂಗ್ ಅವರಿಗೆ ಹೇಮಂತ್ ಕರ್ಕರೆ ತುಂಬ ಆಪ್ತರಾಗಿದ್ದರು ಎಂಬುದನ್ನು ನಾನು ಕೇಳಿದ್ದೇನೆ. ಆದರೆ, ನನ್ನ ಬಳಿ ಇದಕ್ಕೆ ಪುರಾವೆ ಇಲ್ಲ. ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಆರ್ಎಸ್ಎಸ್ ಅನ್ನು ಉಗ್ರ ಸಂಘಟನೆ ಎಂದೇ ಬಿಂಬಿಸಿ, ಅದು ಬಾಂಬ್ ತಯಾರಿಸುತ್ತದೆ ಎಂದಿದ್ದರು. ಅವರ ಆಗ್ರಹ, ಸೂಚನೆ ಮೇರೆಗೇ ಇಂಧೋರ್ನಲ್ಲಿ ಹಲವರನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿತ್ತು ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಹುತಾತ್ಮ ಅಧಿಕಾರಿ ಹೇಮಂತ್ ಕರ್ಕರೆಯವರಿಗೆ ನಾನು ಶಾಪಕೊಟ್ಟಿದ್ದಕ್ಕೇ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಈಗ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
If Hemant Karkare’s Role as Police Officer Was ‘Not Correct’, We Will Say So: Sumitra Mahajan