ಬಿಜೆಪಿ ರಾಜ್ಯಾದ್ಯಕ್ಷರ ಗಾದಿಗೆ ಹಲವರ ಪೈಪೋಟಿ

ಬೆಂಗಳೂರು, ಏ.29- ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಪಕ್ಷದ ಹಲವು ಹಿರಿಯ ನಾಯಕರ ಕಣ್ಣು ಬಿದ್ದಿದ್ದು, ಪಟ್ಟಕ್ಕಾಗಿ ಸಾಕಷ್ಟು ಕಸರತ್ತು ಆರಂಭವಾಗಿದೆ.

ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ಹಲವು ಮಂದಿ ಪೈಪೋಟಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪನವರ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ಫಲಿತಾಂಶದ ಬಳಿಕ ನೂತನ ರಾಜ್ಯಾಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.

ರಾಜ್ಯಾಧ್ಯಕ್ಷರ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ನಿಯುಕ್ತಿಗೊಳಿಸಿ, ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ನಾಯಕರ ಚಟುವಟಿಕೆ ಚುರುಕುಗೊಂಡಿದೆ. ಯಡಿಯೂರಪ್ಪ ಅವರಿಂದ ತೆರವಾಗುವ ರಾಜ್ಯಾಧ್ಯಕ್ಷರ ಹುದ್ದೆಗೆ ಬಿಜೆಪಿ ನಾಯಕರ ಮಧ್ಯೆ ಪೈಪೋಟಿ ಶುರುವಾಗಿದೆ. ಡಿ.ವಿ. ಸದಾನಂದಗೌಡ, ಆರ್.ಅಶೋಕ್, ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ನಳೀನ್‍ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಸುರೇಶ್‍ಕುಮಾರ್ ಸೇರಿದಂತೆ ಸಾಲು ಸಾಲು ನಾಯಕರು ರೇಸ್‍ನಲ್ಲಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ, ಹೈದ್ರಾಬಾದ್-ಕರ್ನಾಟಕ ಭಾಗಗಳು ಸೇರಿದಂತೆ ಸಮುದಾಯವನ್ನು ಮುಂದಿಟ್ಟುಕೊಂಡು ನಾಯಕರ ಲಾಬಿ ಆರಂಭಿಸಿದ್ದಾರೆ. ಇನ್ನು ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಪರ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷರ ಹುದ್ದೆಗೆ ನೇಮಿಸಿ ಎಂದು ಹೈಕಮಾಂಡ್ ಮುಂದೆ ಯಡಿಯೂರಪ್ಪ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪನವರ ಪ್ರಸ್ತಾಪವನ್ನು ಪರಿಗಣಿಸುತ್ತೇವೆ ಎಂದಿರುವ ಹೈಕಮಾಂಡ್ ನಾಯಕರು, ಮೇ 23ರ ಬಳಿಕ ಪಕ್ಷಕ್ಕೆ ನೂತನ ಸಾರಥಿ ನೇಮಕ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಪಟ್ಟಕ್ಕಾಗಿ ಜಾತಿ ಆಧಾರದ ಮೇಲೆ ಲಾಬಿ ನಡೆಯುತ್ತಿದೆ. ಬಿಜೆಪಿ ಹೈಕಮಾಂಡ್ ಮುಂದೆ ಜಾತಿ ಆಧಾರದ ಮೇಲೆ ಪೈಪೋಟಿ ನಡೆದಿದೆ. ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಡಿ.ವಿ.ಸದಾನಂದಗೌಡ ಎರಡನೆ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಲು ಪ್ಲಾನ್ ಮಾಡಿದ್ದಾರೆ.

ರಾಜ್ಯದಲ್ಲಿ ಪಿಎಂ ರ್ಯಾಲಿ ಸೇರಿದಂತೆ 24 ರ್ಯಾಲಿಗಳನ್ನು ಯಶಸ್ವಿಯಾಗಿ ಮಾಡಿದ್ದೇನೆಂದು ಆರ್.ಅಶೋಕ್ ಕೂಡ ಪ್ರಯತ್ನ ನಡೆಸಿದರೆ, ಯುವಕರ ಕೋಟಾದಡಿ ಸಿ.ಟಿ.ರವಿ, ಸುನೀಲ್ ಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ.

ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಹಿಡಿತಕ್ಕಾಗಿ ಬಿ.ಎಲ್. ಸಂತೋಷ್ ತೆರೆಮರೆಯ ಯತ್ನ ನಡೆಸಿದ್ದಾರೆ. ಆದರೆ, ಅಧ್ಯಕ್ಷ ಹುದ್ದೆ ತಮ್ಮವರಿಗೆ ಇರಲಿ ಎಂದು ಬಿಎಸ್‍ವೈ ಯೋಚಿಸಿದ್ದು, ಅದರಂತೆ ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಗೋವಿಂದ ಕಾರಜೋಳ ಪರ ಒಲವು ಹೊಂದಿದ್ದಾರೆ.

ಅಧ್ಯಕ್ಷ ಹುದ್ದೆ ವಿಚಾರದ ಗುಟ್ಟನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬಿಟ್ಟುಕೊಟ್ಟಿಲ್ಲ. ಬಿಎಸ್‍ವೈ ಬದಲಾವಣೆ ಖಚಿತ ಎಂದಷ್ಟೇ ಸುಳಿವು ನೀಡಲಾಗಿದ್ದು, ಯಾರನ್ನು ಪಟ್ಟದ ಮೇಲೆ ಕೂರಿಸುತ್ತಾರೆ ಎಂಬ ಸುಳಿವನ್ನು ನೀಡಿಲ್ಲ. ಜಾತಿ ಆಧಾರ, ಮತ ಬ್ಯಾಂಕ್, ಸಂಘಟನಾ ಚತುರತೆ, ಯುವಕರು, ಹೊಸಮುಖ, ಪಕ್ಷನಿಷ್ಠೆ ಯಾವುದರ ಆಧಾರ ಮೇಲೆ ಷಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂಬುದು ರಹಸ್ಯವಾಗಿಯೇ ಉಳಿದಿದೆ.

ಬಿಜೆಪಿ ಹಾಲಿ ಅಧ್ಯಕ್ಷರ ಅವಧಿ ಏಪ್ರಿಲ್ 5ಕ್ಕೆ ಅಂತ್ಯವಾಗಿದೆ. ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕವಾಗುವ ಸಾಧ್ಯತೆ ಇದೆ. ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾಗುವ ಅಧ್ಯಕ್ಷ ಸ್ಥಾನದ ಮೇಲೆ ಸಾಲು ಸಾಲು ನಾಯಕರ ಕಣ್ಣು ಬಿದ್ದಿದ್ದು, ಒಕ್ಕಲಿಗ, ವೀರಶೈವ-ಲಿಂಗಾಯತ, ದಲಿತ, ಬ್ರಾಹ್ಮಣ, ಒಬಿಸಿ ಸೇರಿದಂತೆ ಎಲ್ಲಾ ಸಮುದಾಯದ ಹಿರಿಯ ನಾಯಕರು ಅಧ್ಯಕ್ಷ ಗಾದಿಗಾಗಿ ಪ್ರಯತ್ನ ನಡೆಸಿದ್ದಾರೆ.

ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹೆಸರು ಕೇಳಿಬಂದಿದ್ದರೆ, ದಲಿತ ಸಮುದಾಯದಿಂದ ಅರವಿಂದ ಲಿಂಬಾವಳಿ, ರವಿಕುಮಾರ್, ಗೋವಿಂದ ಕಾರಜೋಳ, ವೀರಶೈವ-ಲಿಂಗಾಯತ ಸಮುದಾಯದಿಂದ ಜಗದೀಶ್ ಶೆಟ್ಟರ್, ಶಿವಕುಮಾರ್ ಉದಾಸಿ ಹಾಗೂ ಬ್ರಾಹ್ಮಣ ಸಮುದಾಯದಿಂದ ಸುರೇಶ್‍ಕುಮಾರ್, ಬಿ.ಎಲ್. ಸಂತೋಷ್ ಹೆಸರು ಕೇಳಿಬಂದಿದೆ. ಹಾಗೆಯೇ ಒಬಿಸಿ ಸಮುದಾಯದಿಂದ ಕೆ.ಎಸ್. ಈಶ್ವರಪ್ಪ, ಸುನೀಲ್ ಕುಮಾರ್ ಹೆಸರು ಚಾಲ್ತಿಯಲ್ಲಿವೆ. ಇನ್ನು ಡಿ.ವಿ.ಸದಾನಂದಗೌಡ ಒಂದು ವೇಳೆ ಬೆಂಗಳೂರು ಉತ್ತರದಿಂದ ಸೋತರೆ ಅಧ್ಯಕ್ಷ ಪಟ್ಟದತ್ತ ಕಣ್ಣಾಯಿಸೋ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ