ಬೆಳಗಾವಿ,ಏ.29- ಸರ್ಕಾರದ ವಿರುದ್ಧ ಸಮರ ಸಾರಿ ರೆಬಲ್ ಆಗಿ ರಾಜೀನಾಮೆ ಕೊಡಲು ಮುಂದಾಗಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಈಗ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ದಿನದಂದೇ ರಾಜೀನಾಮೆ ನೀಡಲು ಮುಂದಾಗಿದ್ದ ಅವರು, ಈಗ ಫಾರಿನ್ ಟ್ರಿಪ್ ಹೊರಟು ನಿಂತಿದ್ದಾರೆ. ಒಂದು ತಿಂಗಳ ಕಾಲ ಯೂರೋಪ್ ಪ್ರವಾಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ನಾನೊಬ್ಬನೆ ರಾಜೀನಾಮೆ ನೀಡಿದರೆ ಏನೂ ಉಪಯೋಗವಾಗುವುದಿಲ್ಲ. ನನ್ನ ಬೆಂಬಲಿಗರೊಂದಿಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ಮೈತ್ರಿ ಸರ್ಕಾರಕ್ಕೆ ಭಂಗ ಉಂಟು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದರಾದರೂ ಅವರ ಬಾಂಬ್ ಠುಸ್ಸಾಗಿತ್ತು. ಅವರ ಆಪ್ತರು ಅವರಿಗೆ ಕೈ ಕೊಟ್ಟಿದ್ದರು.
ಅವರನ್ನು ನಂಬಿಕೊಂಡು ಬಿಜೆಪಿಯವರು ಯಾವುದೇ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿರಲಿಲ್ಲ. ಹೀಗಾಗಿ ರಮೇಶ್ ಏಕಾಂಗಿಯಾಗಿದ್ದರು. ಮತ್ತು ಮೌನಕ್ಕೆ ಶರಣಾಗಿದ್ದರು. ಏನೇ ಆದರೂ ಅವರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತು ಸ್ವತಃ ಮುಖ್ಯಮಂತ್ರಿಗಳೇ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಅಲ್ಲಿಂದ ರಮೇಶ್ ಜಾರಕಿಹೊಳಿ ತಣ್ಣಗಾಗಿದ್ದರು. ಸೋದರ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮತ್ತೊಬ್ಬ ಸಹೋದರ ಬಿಜೆಪಿಯ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಧ್ಯಪ್ರವೇಶಿಸಿ ಈ ರೀತಿ ಮಾತನಾಡದಂತೆ ಸಲಹೆ ಮಾಡಿದ್ದರು. ಈಗ ರಮೇಶ್ ಜಾರಕಿಹೊಳಿ ಯಾವುದೇ ರಾಜಕೀಯ ಬೇಡ ಎಂದು ವಿದೇಶಕ್ಕೆ ಹೊರಟು ನಿಂತಿದ್ದಾರೆ. ಇದಕ್ಕಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗಿದೆ. ನಾಲ್ಕು ದಿನಗಳ ಒಳಗೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದ ಅವರು ಸದ್ಯ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ.
ಮೇ 23ರ ನಂತರ ಮಹತ್ವದ ಬದಲಾವಣೆ ಸಾಧ್ಯತೆ ಆಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಮುಂದೇನು ಆಗಲಿದೆಯೋ ಕಾದು ನೋಡಬೇಕು.