ನವದೆಹಲಿ: ರಫೇಲ್ ವಿವಾದ ಕುರಿತು ಪ್ರಧಾನಿ ಮೋದಿ ಚೌಕಿದಾರ್ ಚೋರ್ ಹೈ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ಸಂಸದೆ ಮೀನಾಕ್ಷಿ ಲೇಖಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ರಫೇಲ್ ತೀರ್ಪನ್ನು ಮತ್ತೆ ಪರಿಶೀಲಿಸಲು ಒಪ್ಪಿಕೊಂಡ ನಂತರ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಚೌಕಿದಾರ್ ಚೋರ್ ಎಂದು ಕರೆಯುತ್ತಿದ್ದರು. ನರೇಂದ್ರ ಮೋದಿಯವರು ಕಳ್ಳತನ ಮಾಡಿದ್ದಾರೆಂದು ಸುಪ್ರೀಂಕೋರ್ಟ್ ತೀರ್ಪು ಸಾಬೀತು ಪಡಿಸಿದೆ ಎಂದು ಹೇಳಿದ್ದರು.
ಆದರೆ, ಚೌಕಿದಾರ್ ಚೋರ್ ಎನ್ನುತ್ತಿದ್ದ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದ ಸುಪ್ರೀಂಕೋರ್ಟ್ಗೆ ರಾಹುಲ್ ಗಾಂಧಿ ಕ್ಷಮೆ ಕೋರಿದ್ದರು. ರಾಜಕೀಯ ಪ್ರಚಾರದ ಬಿರುಸಿನಲ್ಲಿ ಹಾಗೆ ಹೇಳಿದ್ದೆ ಎಂದಿದ್ದರು. ಆದರೆ, ಈಗ ರಾಹುಲ್ ಗಾಂಧಿ, ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ರಾಜಕೀಯ ಪ್ರಸಿದ್ಧಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ವಿವಾದದಲ್ಲಿ ನ್ಯಾಯಾಲಯವನ್ನು ಎಳೆಯುತ್ತಿದ್ದಾರೆ. ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಸಂಸದರು, ನ್ಯಾಯಾಂಗದ ಪ್ರಕ್ರಿಯೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ನಾಳೆ ಪರಿಶೀಲನೆ ಮಾಡಲಿದೆ.
Rahul Gandhi wants Rafale contempt plea closed, says BJP seeking political mileage