ನವದೆಹಲಿ: ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಭಾಗದತ್ತ ಫನಿ ಚಂಡುಮಾರುತ ಧಾವಿಸುತ್ತಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಫನಿ ಚಂಡಮಾರುತ ತೀವ್ರ ಸ್ವರೂಪವನ್ನು ಪಡೆದುಕೊಂಡು ಮಂಗಳವಾರ ಸಂಜೆ ತೀರಕ್ಕೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈನ ಆಗ್ನೇಯ ದಿಕ್ಕಿನ 1,050 ಕಿ.ಮೀ ಮತ್ತು ಆಂಧ್ರಪ್ರದೇಶದ ಮಚಿಲಿಪಟ್ನಮ್ ನಿಂದ 1,230 ಕಿ.ಮೀ ದೂರದಲ್ಲಿ ಫನಿ ಚಂಡಮಾರುತ ಇದೆ. ವಾಯುವ್ಯ ದಿಕ್ಕಿನಲ್ಲಿ ಅದು ಗಂಟೆಗೆ 16 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಏಪ್ರಿಲ್ 30 ರ ನಂತರ ಈಶಾನ್ಯ ದಿಕ್ಕಿನಲ್ಲಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಈಗ ಸಮುದ್ರದಲ್ಲಿರುವ ಮೀನುಗಾರರಿಗೆ ವಾಪಸ್ ಬರಲು ಸೂಚನೆ ನೀಡಲಾಗಿದೆ.
ಮೇ 3 ರ ವೇಳೆ ಚಂಡಮಾರುತದ ವೇಗ ಕ್ರಮೇಣ ಕಡಿಮೆಯಾಗಲಿದೆ.ತಮಿಳುನಾಡು ಕರಾವಳಿ ದಾಟುವ ಸಾಧ್ಯತೆ ಕಡಿಮೆ ಎಂದು ಏರಿಯಾ ಸೈಕ್ಲೋನ್ ವಾರ್ನಿಂಗ್ ಸೆಂಟರ್ ನ ಮುಖ್ಯಸ್ಥರಾಗಿರುವ ಎಸ್ ಬಾಲಚಂದ್ರನ್ ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಈಗ ಈ ಚಂಡಮಾರುತದ ಹೆಸರನ್ನು ಬಾಂಗ್ಲಾದೇಶ ಸೂಚಿಸಿದಂತೆ ‘ಫನಿ ‘ಎಂದು ಹೆಸರಿಸಲಾಗಿದೆ.