ಖೇರ್ಡಾದಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಅನಾವರಣ ದಲಿತ ಬಾಂಧವರು ಜಾಗೃತರಾಗಿ : ಯುವ ಮುಖಂಡ ವಿಜಯಕುಮಾರ

ಬೀದರ್: ಔರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಹಾಗೂ ಅಂಬೇಡ್ಕರ್ ಅವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮ ತಾಲೂಕಿನ ಖೇರ್ಡಾ ಗ್ರಾಮದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.

ಪೂಜ್ಯರ ಸಾನ್ನಿಧ್ಯ ಹಾಗೂ ಮುಖಂಡರ ನೇತೃತ್ವದಲ್ಲಿ ಸಾಮೂಹಿಕವಾಗಿ ಬಾಬಾ ಸಾಹೇಬರ್ ಮೂರ್ತಿ ಅನಾವರಣಗೊಳಿಸಲಾಯಿತು. ಯುವ ಮುಖಂಡ ವಿಜಯಕುಮಾರ ಕೌಡ್ಯಾಳ ಮಾತನಾಡಿ, ಹಿಂದುಳಿದ ಸಮಾಜ ದಲಿತ ಬಾಂಧವರು ಒಗ್ಗಟ್ಟಾಗಿ ಜಾಗೃತರಾಗಬೇಕಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂರಕ್ಷಣೆಗೆ ಎಲ್ಲರು ಒಗ್ಗಟ್ಟಿನ ಪ್ರದರ್ಶನ ತೋರಬೇಕಾಗಿದೆ ಎಂದರು.

ಬಾಬಾ ಸಾಹೇಬರು ಸರ್ವ ಜನಾಂಗಕ್ಕೆ ನ್ಯಾಯ ಒದಗಿಸಿ ಸಂವಿಧಾನ ನೀಡಿದ್ದಾರೆ.

ಆದರೆ ಇದೀಗ ಸಂವಿಧಾನ ಬದಲಾವಣೆ ಮಾತುಗಳು ಕೆಲವರು ಹೇಳುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ದಲಿತ, ಹಿಂದುಳಿದ ಬಾಂಧವರು ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಡಬೇಕಾಗಿದೆ ಎಂದು ಕರೆ ನೀಡಿದರು.

ಮುಖಂಡ ಮಾರುತಿ ಬೌದ್ಧೆ ಮಾತನಾಡಿ, ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಭಾರತದ ಸಂವಿಧಾನ ಒಂದು. ಈ ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ಮುಖಂಡ ಬಾಬುರಾವ ಪಾಸ್ವಾನ್ ಮಾತನಾಡಿ, ಅಂಬೇಡ್ಕರ್ ಅವರು ಮಹಾಜ್ಞಾನಿ. ಇಂದಿನ ಯುವಕರಿಗೆ ಅವರು ಮಾದರಿ ಎಂದು ಹೇಳಿದರು.

ಭಂತೆ ಜ್ಞಾನಸಾಗರ ಸಾನ್ನಿಧ್ಯ, ಗೋಪಾಳರಾವ ಶಂಕರರಾವ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲೀಕರಾವ, ಪ್ರಮುಖರಾದ ಶೇಷರಾವ ಬೆಳಕುಣಕಿರ್, ಶಿವಮೂರ್ತಿ ಸುಭಾನೆ, ರಾಜಕುಮಾರ ಮೊರೆ, ಡಾ.ಉಮೇಶ ನಾಯ್ಕೆ ಬೋಂತಿ, ಅಶೋಕರಾವ ಮುಳೆ, ಶಿವಕುಮಾರ ಮೇತ್ರೆ, ಅಶೋಕ ಪಾಟೀಲ್, ಪಂಡಿತ ಪಾಟೀಲ್, ನಾರಾಯಣ ಪಾಟೀಲ್, ಆನಂದ ಚವ್ಹಾಣ್, ಧನಾಜಿ ಕಾಂಬ್ಳೆ, ಬಂಟಿ ದರಬಾರೆ ಸೇರಿದಂತೆ ವಿವಿಧ ಗ್ರಾಮಸ್ಥರು, ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ