ಇಂದು ಸಂಜೆ ವೇಳೆಗೆ ತೀವ್ರಗೊಳ್ಳಲಿರುವ ಫನಿ ಚಂಡಮಾರುತ

ಬೆಂಗಳೂರು, ಏ.29-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಫನಿ ಚಂಡಮಾರುತ ಇಂದು ಸಂಜೆ ವೇಳೆಗೆ ತೀವ್ರಗೊಳ್ಳಲಿದ್ದು, ರಾಜ್ಯದ ಮೇಲೆ ಅದರ ಪರಿಣಾಮ ಹೆಚ್ಚಾಗಿರುವುದಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎ.ಶ್ರೀನಿವಾಸರೆಡ್ಡಿ ತಿಳಿಸಿದರು.

ರಾಜ್ಯದ ದಕ್ಷಿಣ ಒಳನಾಡಿನ ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಧಾರವಾಡ ಭಾಗದಲ್ಲಿ ಟ್ರಪ್ ನಿರ್ಮಾಣವಾಗಿದ್ದು, ಅಲ್ಲೂ ಸಾಧಾರಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ ಎಂದರು.

ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಕೋಲಾರ, ಬೆಂಗಳೂರು, ರಾಮನಗರ ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಫನಿ ಚಂಡಮಾರುತ ನಾಳೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಆನಂತರ ಅತಿಯಾದ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಬಂಗಾಳಕೊಲ್ಲಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದು, ಮೇ 3 ರ ವೇಳೆಗೆ ಭೂ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಅಲ್ಲಿಯವರೆಗೂ ಸಮುದ್ರದಲ್ಲೇ ಇರುವುದರಿಂದ ದಿನದಿಂದ ದಿನಕ್ಕೆ ಚಂಡಮಾರುತ ಬಲಗೊಳ್ಳುತ್ತ ಹೋಗುತ್ತದೆ.

ಒಡಿಸ್ಸಾ, ಕರಾವಳಿ ಪ್ರವೇಶಿಸುವ ಸಾಧ್ಯತೆಗಳು ಕಂಡು ಬರುತ್ತಿವೆ. ತಮಿಳುನಾಡು ಪುದುಚೇರಿ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ ಎಂದ ಅವರು, ಫನಿ ಚಂಡಮಾರುತದ ಮಾರಕ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹಾಗೂ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಮಳೆ ಕೊರತೆ:
ಪೂರ್ವ ಮುಂಗಾರಿನ ಮಳೆ ಪ್ರಮಾಣ ರಾಜ್ಯದಲ್ಲಿ ಶೇ.35ರಷ್ಟು ಕೊರತೆ ಕಂಡುಬಂದಿದೆ. ದೇಶದಲ್ಲಿ ಪೂರ್ವಮುಂಗಾರಿನ ಮಳೆ ಶೇ.27ರಷ್ಟು ಕೊರತೆ ಉಂಟಾಗಿದ್ದರೆ, ಅದಕ್ಕಿಂತಲೂ ರಾಜ್ಯದಲ್ಲಿ ಹೆಚ್ಚಿನ ಕೊರತೆ ಕಂಡುಬಂದಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವಾಡಿಕೆ ಮಳೆ ಪ್ರಮಾಣ 40 ಮಿಲಿಮೀಟರ್ ಆಗಿದ್ದು, ಇದುವರೆಗೆ 24.6 ಮಿ.ಮೀನಷ್ಟು ಮಾತ್ರ ಮಳೆಯಾಗಿದೆ. ಧಾರವಾಡ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಿಜಯಪುರ, ರಾಮನಗರ, ಚಾಮರಾಜನಗರ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ.

ಹವಾ ಮುನ್ಸೂಚನೆ ಪ್ರಕಾರ ಬೇಸಿಗೆ ಮಳೆ ಸದ್ಯಕ್ಕೆ ಯಥಾ ರೀತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ