ಬೆಂಗಳೂರು, ಏ.29- ವಿದ್ಯುತ್ ತಂತಿ ತಗುಲಿ ಆಟವಾಡುತ್ತಿದ್ದ ಬಾಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವ ಸಂದರ್ಭದಲ್ಲೇ ನಿರ್ಲಕ್ಷ್ಯಕ್ಕೆ ಕಾರಣರಾದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಬೆಸ್ಕಾಂ ಎಂಡಿ ವಿರುದ್ಧ ಬಿಜೆಪಿ ನಂದಿನಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದೆ.
ಮಾಜಿ ಶಾಸಕ ನೆ.ಲ.ನರೇಂದ್ರಬಾಬು ನೇತೃತ್ವದಲ್ಲಿ ನಂದಿನಿ ಬಡಾವಣೆ ಠಾಣೆಗೆ ಆಗಮಿಸಿದ ಕಾರ್ಯಕರ್ತರು ಆಯುಕ್ತ ಹಾಗೂ ಬೆಸ್ಕಾಂ ಎಂಡಿ ವಿರುದ್ಧ ದೂರು ನೀಡಿದ್ದಾರೆ.
ಈ ಹಿಂದೆ ಉದಯ್ ಎಂಬ ಬಾಲಕ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಮಹಾಲಕ್ಷ್ಮಿ ಬಡಾವಣೆಯ ನಾಗಲಿಂಗೇಶ್ವರ ದೇವಾಲಯದ ಬಳಿ ವಿದ್ಯುತ್ ಕಂಬದಿಂದ ತಂತಿ ನೇತಾಡುತ್ತಿದ್ದು, ಇದನ್ನು ದುರಸ್ತಿ ಮಾಡುವಂತೆ ಸ್ಥಳೀಯರು ಬೆಸ್ಕಾಂಗೆ ಮನವಿ ಮಾಡಿ ಒಂದು ವಾರ ಕಳೆದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.
ದುರಾದೃಷ್ಟವೆಂಬಂತೆ ಇದೇ ರಸ್ತೆಯಲ್ಲಿ ಆಟವಾಡುತ್ತಿದ್ದ ಸಾಯಿಚರಣ್ ಎಂಬ ಬಾಲಕ ವಿದ್ಯುತ್ ತಂತಿ ತುಳಿದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇದಕ್ಕೆ ಬಿಬಿಎಂಪಿ ಆಯುಕ್ತರು ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗಿದೆ.
ಹಾಗಾಗಿ ಇವರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಸ್ಥಳೀಯ ಪಾಲಿಕೆ ಸದಸ್ಯರಾದ ರಾಜೇಂದ್ರಕುಮಾರ್, ಬಿಜೆಪಿ ಮುಖಂಡರಾದ ಶಿವಾನಂದ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪ್ರಾಣಾಪಾಯದಿಂದ ಬಚಾವ್: ವಿದ್ಯುತ್ ಅವಘಡದಿಂದ ಗಂಭೀರವಾಗಿ ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಯಿಚರಣ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಿನ್ನೆವರೆಗೂ ಕೋಮಾದಲ್ಲಿದ್ದ ಚರಣ್ ಸತತ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ಇಂದು ಪೋಷಕರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ. ನಾಳೆ ಬಾಲಕನನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗುವುದು ಎಂದು ವೈದ್ಯ ಮೂಲಗಳು ತಿಳಿಸಿವೆ.