ಬೆಂಗಳೂರು, ಏ.29- ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕುರ್ಚಿಗೆ ಅಧಿಕಾರಿಗಳಿಂದಲೇ ಜಂಗೀಕುಸ್ತಿ ಆರಂಭವಾಗಿದೆ.
ಇದುವರೆಗೆ ಮುಖ್ಯ ಲೆಕ್ಕಾಧಿಕಾರಿಯಾಗಿ ಮಹದೇವ್ ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಜಾಗಕ್ಕೆ ಗೋವಿಂದರಾಜು ಎಂಬುವವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಆದರೂ ಸಹ ಮಹದೇವ್ ಅವರು ಅಧಿಕಾರ ಹಸ್ತಾಂತರ ಮಾಡದಿರುವುದು ಇಬ್ಬರ ನಡುವೆ ಜಂಗಿಕುಸ್ತಿಗೆ ಕಾರಣವಾಗಿದೆ.
ಲೋಕಸಭಾ ಚುನಾವಣೆ ದಿನಾಂಕ ನಿಗದಿಗೂ ಮುನ್ನ ಗೋವಿಂದರಾಜು ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ದಿನವೇ ಗೋವಿಂದರಾಜು ಅವರು ಕಚೇರಿಗೆ ಬಂದಿದ್ದರು. ಆದರೆ, ಮಹದೇವ್ ಅವರು ಅಧಿಕಾರ ಮಾತ್ರ ಹಸ್ತಾಂತರಿಸಿರಲಿಲ್ಲ. ಹಾಗಾಗಿ ಯಾರು ಲೆಕ್ಕಾಧಿಕಾರಿ ಎಂಬ ಗೊಂದಲ ಮೂಡಿತ್ತು.
ಇಂದು ಏಕಾಏಕಿ ಗೋವಿಂದರಾಜು ಅವರು ಲೆಕ್ಕಾಧಿಕಾರಿ ಕಚೇರಿಗೆ ಬಂದು ಅಧೀನ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಹದೇವ್ ಅಧಿಕಾರ ಹಸ್ತಾಂತರಿಸುವ ಮುನ್ನವೇ ಗೋವಿಂದರಾಜು ಕಾರ್ಯನಿರ್ವಹಿಸಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಅನ್ಯ ಕಾರ್ಯನಿಮಿತ್ತ ಗೋವಿಂದರಾಜು ಅವರು ಹೊರಗಡೆ ನಾಳೆ ಕಚೇರಿಗೆ ಬರಲಿದ್ದು, ಮಹದೇವ್ ಅವರು ಅಧಿಕಾರ ಹಸ್ತಾಂತರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.