ಚಿತ್ರಕಲೆಯ ಅನನ್ಯ ಸಾಧಕಿ ಕಲಾ ಕಸ್ತೂರಿ ಮೀರಾಕುಮಾರ್-ಮಾಜಿ ಸಚಿವೆ ರಾಣಿ ಸತೀಶ್

ಬೆಂಗಳೂರು, ಏ.29- ಹಳೆಯ ರೂಪಗಳಲ್ಲೆ ಹೊಸತನದ ಹುಡುಕಾಟದಲ್ಲಿ ತೊಡಗಿ ಉತ್ಸಾಹದಿಂದ ಕಲಾ ಸೇವೆ ಮಾಡುತ್ತಿರುವ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾ ಕಸ್ತೂರಿ ಮೀರಾಕುಮಾರ್‍ರವರ ಸಾಧನೆ ಅಪೂರ್ವವಾದುದು ಎಂದು ಮಾಜಿ ಸಚಿವೆ ರಾಣಿ ಸತೀಶ್ ಬಣ್ಣಿಸಿದರು.

ನಗರದ ಆರ್.ಎಂ.ವಿ ಎರಡನೇ ಹಂತದಲ್ಲಿ ಶ್ರೀ ವಿಶ್ವಂಭರ ವಿಶ್ವಕಲಾ ಅಕಾಡೆಮಿ ಆಯೋಜಿಸಿದ್ದ ಕಲಾಕಸ್ತೂರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಅಲೆಗಳ ಪ್ರಭಾವ ವಲಯದಿಂದ ಹೊರಕ್ಕೆ ನಿಂತು ತಾಯಿ ನಾಡಿನ ಮಣ್ಣಿನ ಗುಣವನ್ನು ಬೆಳೆಸಿಕೊಂಡು ಕಲಾ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿರಿಯ ಕಲಾವಿದ ಡಾ.ಬಿ.ಕೆ.ಎಸ್.ವರ್ಮ ಮಾತನಾಡಿ, ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ನೈಪುಣ್ಯತೆ ಪಡೆದಿರುವ ಇವರ ಕಲಾಕೃತಿಗಳು ಜನಮನವನ್ನು ಸೂರೆಗೊಂಡಿವೆ. ಅಪಾರ ಜೀವನ ಪ್ರೀತಿ ಮತ್ತು ಆಧ್ಯಾತ್ಮಿಕ ಚಿಂತನದಿಂದ ಮೂಡಿ ಬಂದ ಇವರ ಕಲಾಕೃತಿಗಳು ಕಲಾ ಪ್ರಪಂಚಕ್ಕೆ ನೀಡಿದ ಕೊಡುಗೆ ಅಪಾರ ಎಂದು ನುಡಿದರು.

ತಮ್ಮ ಚಿತ್ರಗಳಲ್ಲಿ ಆಧ್ಯಾತ್ಮದ ಧ್ವನಿಯನ್ನು ಸಮರ್ಥವಾಗಿ ಚಿತ್ರಿಸುವ ಇವರ ಕಲಾಕೃತಿಗಳೆ ಅಲ್ಲದೆ ಇವರ ಮನೆಯು ಕೂಡ ಒಂದು ಆರ್ಟ್ ಗ್ಯಾಲರಿಯಂತಿದೆ.

ಇವರ ಕೃತಿಗಳಲ್ಲಿ ಪ್ರೌಢತೆ, ದೈವಿಕತೆ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಚಿತ್ರಕಲೆಯಲ್ಲಿ ತಾನ್ನಿನ್ನೂ ವಿದ್ಯಾರ್ಥಿ ಎಂಬ ವಿನಮ್ರ ಭಾವ ಇವರ ಅಧ್ಯಯನಾಸಕ್ತಿಯನ್ನು ತಿಳಿಯ ಪಡಿಸುತ್ತದೆ ಎಂದು ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಶಿಧರ ಕೋಟೆ , ರಂಗಕರ್ಮಿ ಡಾ.ಕೆಂಚನೂರು ಶಂಕರ್ , ಸಾಂಸ್ಕøತಿಕ ಸಂಘಟಕ ನೀಲಕಂಠ ಅಡಿಗ ಮೊದಲಾದವರು ಕಲಾವಿದ ಗೋವಿಂದರಾಜು ಜೀಯರ್ ರವರಿಗೆ ಗುರುವಂದನೆ ಅರ್ಪಿಸಲಾಯಿತು .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ