ಬಳ್ಳಾರಿ,ಏ.28- ಕಂಪ್ಲಿ ಶಾಸಕ ಗಣೇಶ್ ಈಗ ದೈವದ ಮೊರೆ ಹೋಗಿದ್ದಾರೆ.
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ಕಂಪ್ಲಿ ಶಾಸಕ ಗಣೇಶ್ ಇದೀಗ ನಾಗಸಾಧುಗಳ ಮೊರೆ ಹೋಗಿದ್ದಾರೆ.
ಸಂಡೂರಿನ ಜೋಗಿಹಳ್ಳದ ಬಳಿಯಿರುವ ಅನ್ನಪೂರ್ಣೇಶ್ವರಿ ಮಠದಲ್ಲಿನ ನಾಗಸಾಧುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಗಣೇಶ್ ಅವರು ಕುಟುಂಬ ಸಮೇತರಾಗಿ ನಾಗಸಾಧು ಮೊರೆ ಹೋಗಿದ್ದು, ನಾಗಸಾಧು ಇರುವ ಮಠದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಈ ವೇಳೆ ಮೌನ ವ್ರತದಲ್ಲಿದ್ದ ನಾಗಸಾಧು, ಸ್ಲೇಟ್ನಲ್ಲೇ ಬರೆದು ಒಳ್ಳೆಯದಾಗುತ್ತೆ ಎಂದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.
ಈ ಹಿಂದೆ ಉಪಚುನಾವಣೆಗೂ ಮುನ್ನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಉಗ್ರಪ್ಪ ಅವರು ಈ ನಾಗಸಾಧುಗಳನ್ನೇ ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಗೆಲುವು ಸಾಧಿಸಿದ್ದರು.