ಮಡಕೆ ಕಪ್ಪಗಿದ್ದರೂ ಬೇರೆಯವರನ್ನು ಕಪ್ಪು ಎನ್ನುವಂತಿದೆ- ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಚಿಂಚೋಳಿ,ಏ.28- ಕುಂದಗೋಳ-ಚಿಂಚೋಳಿ ಉಪ ಚುನಾವಣೆ ಕದನ ರಂಗೇರತೊಡಗಿದೆ. ಬಿಜೆಪಿಯಲ್ಲಿನ ಬಂಡಾಯ ದಿನೆ ದಿನೇ ಉಲ್ಬಣಗೊಳ್ಳುತ್ತಿದೆ. ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದ್ದು, ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುನೀಲ್ ವಲ್ಯಾಪುರೆ ತಮ್ಮ ಬೆಂಬಲಿಗರ ಸಭೆ ಕರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಮೇಶ್ ಜಾಧವ್ ಕುಟುಂಬದವರು ಬಿಜೆಪಿ ಬಾವುಟ ಹಿಡಿದಿದ್ದರೆ? ಪಕ್ಷ ಸಂಘಟನೆ ಮಾಡಿದ್ದರೆ? ಈಗ ಪಕ್ಷ ಸೇರ್ಪಡೆಯಾದವರಿಗೆ ಇಷ್ಟೊಂದು ಆದ್ಯತೆ ಕೊಡುವ ಅಗತ್ಯವೇನು ಎಂದು ಸ್ಥಳೀಯ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಟುಂಬ ರಾಜಕಾರಣ ವಿರೋಧಿಸುತ್ತಾ ಬಂದ ಬಿಜೆಪಿಯವರಿಗೆ ಈಗ ಕುಟುಂಬ ರಾಜಕಾರಣವೇ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿಯ ಮೇಲೆ ಹರಿಹಾಯ್ದಿದೆ. ಈ ಕುರಿತು ಟ್ವಿಟ್ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ ಮಡಕೆ ಕಪ್ಪಗಿದ್ದರೂ ಬೇರೆಯವರನ್ನು ಕಪ್ಪು ಎನ್ನುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಶಾಸಕ ದತ್ತಾತ್ರೆಯ ಪಾಟೀಲ್, ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಇವರೆಲ್ಲ ಈಗ ಕುಟುಂಬ ರಾಜಕಾರಣವನ್ನು ಬೆಂಬಲಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಚಿಂಚೋಳಿ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಂಬಾಣಿ ಸಮುದಾಯದ ಮತಗಳನ್ನು ಸೆಳೆಯಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬಿಜೆಪಿಯ ಅವಿನಾಶ್ ಜಾಧವ್‍ಗೆ ಪರ್ಯಾಯವಾಗಿ ಕಾಂಗ್ರೆಸ್ ಬಂಜಾರ ಸಮುದಾಯದ ಸುಭಾಷ್ ರಾಠೋಡ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.

40ಸಾವಿರದಷ್ಟು ಲಂಬಾಣಿ ಮತಗಳಿದ್ದು ಅವುಗಳನ್ನು ವಿಭಜಿಸುವ ಮೂಲಕ ಉಮೇಶ್ ಜಾಧವ್ ಅವರನ್ನು ಸೋಲಿಸಲು ತಂತ್ರ ಹೆಣೆಯಲಾಗಿದೆ. ಇತ್ತ ಕುಂದಗೋಳದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ.

ಯಡಿಯೂರಪ್ಪನವರ ಸಂಬಂಧಿ ಚಿಕ್ಕನಗೌಡರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ಎಂ.ಆರ್.ಪಾಟೀಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಕೈಗೂ ಸಿಗದಂತೆ ಅಜ್ಞಾನಸ್ಥಳ ಸೇರಿಕೊಂಡಿದ್ದಾರೆ. ಭಿನ್ನಮತ ಶಮನಕ್ಕೆ ಬಿಜೆಪಿ ಮುಖಂಡರು ಹರಸಾಹಸ ಪಡುತ್ತಿದ್ದಾರೆ.

ಚಿಕ್ಕನಗೌಡರು ಈ ಬಾರಿ ಮಾತ್ರವೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಮುಂದಿನ ಬಾರಿ ನಿಲ್ಲುವುದಿಲ್ಲ ಎಂದು ಮನವೊಲಿಸಲು ಪ್ರಯತ್ನಿಸಿದರೂ ಎಂ.ಆರ್.ಪಾಟೀಲ್ ಟಿಕೆಟ್ ಬೇಕು ಎಂದು ಹಠ ಮುಂದುವರೆಸಿದ್ದಾರೆ. ಪಕ್ಷದಲ್ಲಿ ಬೇರೆ ಸ್ಥಾನ ಮಾನ ನೀಡುವ ಭರವಸೆ ನೀಡಿದರೂ ಜಪ್ಪಯ್ಯ ಎನ್ನಲಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ತಮ್ಮ ಬೆಂಬಲಿಗರ ಮೂಲಕ ಸಂದೇಶ ರವಾನಿಸಿದ್ದಾರೆ.

ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದ್ದು ಅಭ್ಯರ್ಥಿಗಳ ಆಯ್ಕೆಯಿಂದ ಬಿಜೆಪಿಗೆ ಹೊಸ ತಲೆನೋವು ತಂದಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ