ಬೆಂಗಳೂರು, ಏ.27- ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ಅವರು ನನ್ನ ಆಡಳಿತ ವ್ಯಾಪ್ತಿಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 35 ಕೋಟಿ ಕೆಲಸ ಮಾಡದೆ ಬಿಲ್ ತೆಗೆಸಿಕೊಂಡಿದ್ದಾರೆ ಎಂದು ಸ್ವತಃ ಒಪ್ಪಿಕೊಂಡ ಪ್ರಸಂಗ ಪಾಲಿಕೆ ಸಭೆಯಲ್ಲಿ ಸಂಚಲನ ಸೃಷ್ಟಿಸಿತು.
ಸಭೆಯಲ್ಲಿಂದು ಮಾಜಿ ಮೇಯರ್ ಶಾಂತಕುಮಾರಿ ಮತ್ತು ಬಿಜೆಪಿ ಸದಸ್ಯ ಡಾ.ರಾಜು ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರದಲ್ಲಿ 400 ಕೋಟಿ ರೂ.ನ ಕಾಮಗಾರಿಗಳು ಅರೆಬರೆಯಾಗಿವೆ, ಪೂರ್ಣಗೊಂಡಿಲ್ಲ. ಇದಕ್ಕೆ ಉತ್ತರ ಕೊಡಿಸಿ ಎಂದು ಪಟ್ಟುಹಿಡಿದರು.
ಕೆಲಸ ಪೂರ್ಣಗೊಳ್ಳದ ಕಾರಣ ಜನ ನಮ್ಮ ಮನೆಗಳ ಮುಂದೆ ಬಂದು ಗಲಾಟೆ ಮಾಡುತ್ತಾರೆ. ಜಂಟಿ ಆಯುಕ್ತರು ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ಮಾತನಾಡಿ, 35 ಕೊಟಿ ರೂ.ಕೆಲಸ ಮಾಡಲಾಗಿದೆ.ಆದರೆ, ಅಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ಹೇಳಿದುದು ಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು.
ಈ ವೇಳೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಇರಬೇಕೆ ಎಂದು ಪ್ರತಿಪಕ್ಷದವರು ತರಾಟೆಗೆ ತೆಗೆದುಕೊಂಡರು. ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಯರ್ ಭರವಸೆ ನೀಡಿದರು.