ಬೆಂಗಳೂರು, ಏ.27- ಪಶುವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಸಂಸ್ಥೆ ಸಹಯೋಗದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರವನ್ನು ಪಶು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಡಿ.ನಾರಾಯಣ ಸ್ವಾಮಿ ಇಂದು ಉದ್ಘಾಟಿಸಿದರು.
ವಿಶ್ವ ಪಶು ವೈದಕೀಯ ದಿನಾಚರಣೆಯ ಅಂಗವಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಲೇಸರ್ ಥೆರಪಿ ಕೇಂದ್ರದಲ್ಲಿ ಹಸು, ಎಮ್ಮೆ, ಕುರಿ ಮತ್ತು ಮೇಕೆ ಸೇರಿದಂತೆ ಎಲ್ಲ ಪ್ರಾಣಿಗಳಿಗೆ ಅವಶ್ಯವಿರುವ ಲೇಸರ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪಶು ಪಾಲಕರು ತಮ್ಮ ಸಾಕು ಪ್ರಾಣಿಗಳಿಗೆ ಅಗತ್ಯ ಬಿದ್ದರೆ ಉಚಿತವಾಗಿ ಲೇಸರ್ ಥೆರಪಿ ಚಿಕಿತೆಯನ್ನು ್ಸ ಕೊಡಿಸಬಹುದಾಗಿದೆ.
ಲೇಸರ್ ಥೆರಪಿ ಕೇಂದ್ರ ಉದ್ಘಾಟನೆಗೂ ಮುನ್ನ ಮಾತನಾಡಿದ ಪಶು ವಿಶ್ವವಿದ್ಯಾಲಯದ ಕುಲಪತಿ ನಾರಾಯಣಸ್ವಾಮಿ, ರೈತರಿಗೆ ಪಶುವೈದ್ಯಕೀಯದ ಬಗ್ಗೆ ಅರಿವು ಮೂಡಿಸಲು ಪಶು ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಬಾರಿಯ ದಿನಾಚರಣೆಯಲ್ಲಿ ಲಸಿಕೆಯ ಮಹತ್ವ ಎಂಬ ಘೋಷ ವಾಕ್ಯದೊಂದಿಗೆ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ರೈತರಿಗೆ ಅಲ್ಲದೆ ಪ್ರಾಣಿಗಳಲ್ಲಿ ಕಂಡು ಬರುವ ರೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ರೋಗನಿರೋಧಕ ಲಸಿಕೆ ಹಾಗೂ ಸೂಕ್ತ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೆಲವೊಂದು ರೋಗಗಳಿಂದ ಪ್ರಾಣಿಗಳು ದೀಘಾವಧಿವರೆಗೆ ಬಳಲುತ್ತಿರುತ್ತವೆ ಅಂತಹ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ರಾಷ್ಟ್ರದಲ್ಲೇ ಮೊದಲ ಬಾರಿಗೆ ಲೇಸರ್ ಥೆರಪಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೈತರು ರೋಗಪೀಡಿತ ತಮ್ಮ ಜಾನುವಾರುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಬಹುದು ಆದರೆ ನಾಯಿಗಳಿಗೆ ಕನಿಷ್ಟ ಚಿಕಿತ್ಸಾ ವೆಚ್ಚ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಗುರುಪುರದ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಜತೆ ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದವು.
ಕಾರ್ಯಕ್ರಮದಲ್ಲಿ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಪ್ರಧಾನ ನಿರ್ದೇಶಕ ವೀರೇಂದ್ರ ಉಪಧ್ಯಾಯ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಚ್.ಆರ್.ವಿ.ರೆಡ್ಡಿ, ಡೀನ್ ಪ್ರೊ.ಆರ್.ವಿ. ಪ್ರಸಾದ್ ಸೇರಿ ಇನ್ನಿತರರಿದ್ದರು.