ಬಸ್ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ಚುರುಕುಗೊಳಿಸಲು ಮುನ್ನೆಚರಿಕೆ ಕ್ರಮ

ಬೆಂಗಳೂರು, ಏ.27- ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೆಎಸ್‍ಆರ್‍ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಸೂಚಿಸಿದ್ದಾರೆ.

ಭಯೋತ್ಪಾದಕರು ಬೆದರಿಕೆ ಒಡ್ಡುತ್ತಿದ್ದಾರೆಂಬ ವದಂತಿ ಆಧರಿಸಿ ಕೆಎಸ್‍ಆರ್‍ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭದ್ರತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮಾಡುವುದಲ್ಲದೆ.ವಾರಸುದಾರರು ಇಲ್ಲದೆ ಲಗೇಜುಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಿದ್ದಾರೆ.

ಅಲ್ಲದೆ ಕೆಎಸ್‍ಆರ್‍ಟಿಎಸ್ ಬಸ್ ನಿಲ್ದಾಣಗಳಲ್ಲಿ ಕೈಗೊಳ್ಳಲಾಗುತ್ತಿರುವ ಭದ್ರತಾ ವ್ಯವಸ್ಥೆ ಮತ್ತು ಮೇಲ್ವಿಚಾರಣೆ ಬಗ್ಗೆ ಪ್ರತಿ ಗಂಟೆಗೊಮ್ಮೆ ಸಂಸ್ಥೆಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುತ್ತಿರಬೇಕು ಕೇಂದ್ರ ಕಚೇರಿಯೂ ನಿಯಂತ್ರಣ ಕೊಠಡಿಯೂ ವಾರದ 7ದಿನವು ದಿನದ 24ಗಂಟೆಗಳ ಕಾಲ ಪರಿಣಾಮಕಾರಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಅನುಮಾನಸ್ಪದ ವ್ಯಕ್ತಿ, ವಾರಸುದಾರರಿಲ್ಲದ ವಸ್ತುಗಳು ಸೇರಿದಂತೆ ಯಾವುದೇ ಅಹಿತಕರ ಘಟನೆ ಬಂದ ಕೂಡಲೇ ಸಾರ್ವಜನಿಕರು, ಪ್ರಯಾಣಿಕರು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ, ಘಟಕ ವ್ಯವಸ್ಥಾಪಕರು, ಬಸ್ ನಿಲ್ದಾಣದ ನಿಯಂತ್ರಕರು ಇಲ್ಲವೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕರಿಂದ ಸೂಚನೆ ಬಂದ ತಕ್ಷಣವೇ ಬಸ್ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದ್ದು, ಪ್ರಯಾಣಿಕರ ಲಗೇಜ್‍ಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.ಪ್ರಯಾಣಿಕರು ಮತ್ತು ಪ್ರಯಾಣಿಕರ ಬ್ಯಾಗ್‍ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ