ಬೆಂಗಳೂರು, ಏ.27- ಮಳೆಗಾಲ ಸಮೀಪಿಸುತ್ತಿರುವುದರಿಂದ ನಗರದಾದ್ಯಂತ ಹಳೆಯದಾದ, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕೆಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭವಾಗುತ್ತಿದಂತೆ ಕೊಲಂಬೋ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಲಾಯಿತು.
ನಂತರ ಮುಂದುವರಿದ ಸಭೆಯಲ್ಲಿ ಮಳೆ ಬರುವುದರಿಂದ ಹಳೆಯದಾದ ಮರಗಳು ಉರುಳಿ ಅವಗಢ ಸಂಭವಿಸುವ ಸಾಧ್ಯತೆಯಿದೆ.ನಗರದಾದ್ಯಂತ ತುಂಬಾ ಹಳೆಯದಾದ ಸಾಕಷ್ಟು ಮರಗಳಿವೆ. ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕಿದೆ.ಮರಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೂಡಲೇ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ವನ್ಯಜೀವಿ ಸಂರಕ್ಷಕರಿಗೆ ಗೌರವಧನ ನೀಡದಿರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು ಬೇಸಿಗೆಯಲ್ಲಿ ಎಲ್ಲೆಡೆ ಹಾವು-ಚೇಳುಗಳ ಕಾಟ ಜಾಸ್ತಿಯಾಗಿದೆ. ಮನೆಗಳಿಗೆ ಇವುಗಳು ನುಗ್ಗುವುದರಿಂದ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಕೂಡಲೇ ವನ್ಯ ಜೀವಿ ಸಂರಕ್ಷಕರಿಗೆ ಗೌರವಧನ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಉಪಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜನ್ ಉತ್ತರಿಸಿ ಇದುವರೆಗೆ ಹಳೇಯದಾದ 616 ಮರಗಳನ್ನು ತೆರವುಗೊಳಿಸಲಾಗಿದೆ.3600 ರೆಂಬೆ-ಗೊಂಬೆಗಳನ್ನು ಕತ್ತರಿಸಲಾಗಿದೆ. ತೆರವು ಮಾಡಿರುವ ಮರಳಿಂದ 10ಲಕ್ಷ ರೂ. ಆದಾಯ ಬಂದಿದೆ ಎಂದು ಹೇಳಿದರು.
ಪಾಲಿಕೆಯಲ್ಲಿ ಸದ್ಯ 21 ಟೀಂಗಳಿವೆ ಪ್ರತಿ ಕ್ಷೇತ್ರಕ್ಕೆ ಒಂದರಂತೆ ಒಂದು ಟೀಂ ಅಗತ್ಯವಿದೆ. ಕೂಡಲೇ ಟೆಂಡರ್ ಕರೆದು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಯನಗರದಲ್ಲಿ ನಮ್ಮ ಮೆಟ್ರೊದಿಂದ ಅನಧಿಕೃತವಾಗಿ ಮರಗಳನ್ನು ಕಡಿಯಲಾಗಿದೆ. ಅದು ಚೆನ್ನಾಗಿರುವ ಮರವನ್ನೇ ಅಡ್ಡಿಯಾಗುತ್ತಿರುವ ನೆಪದಲ್ಲಿ ಮರ ಕತ್ತರಿಸಿದ್ದಾರೆ.ತಕ್ಷಣ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಬಿಎಂಆರ್ಸಿಎಲ್ನ ಚಂದ್ರಕಾಂತ್ ಎಂಬುವರ ಮೇಲೆ ಕೇಸು ದಾಖಲು ಮಾಡಲಾಗಿದೆ.ಇನ್ನು ಮುಂದೆ ಚೆನ್ನಾಗಿರುವ ಮರಗಳನ್ನು ಕಡಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರ ಕಡಿಯಲು ಎನ್ಜಿಒಗಳ ಅಡ್ಡಿ:
ನಗರದಲ್ಲಿ ಮರ ಕಡಿಯಲು ಸಾಕಷ್ಟು ಅಡ್ಡಿಯಾಗುತ್ತಿದೆ. ಕೆಲವು ಎನ್ಜಿಒಗಳು ಮರ ಕಡಿಯದಂತೆ ಅಡ್ಡಿಪಡಿಸುತ್ತಿದ್ದಾರೆ.ದಿನಕ್ಕೆ 20-30 ಎನ್ ಜಿಒಗಳು ನಮ್ಮ ಕಚೇರಿಗೆ ಬಂದು ನಗರದಲ್ಲಿ ಮರ ಕಡಿಯದಂತೆ ಮನವಿ ಮಾಡುತ್ತಿವೆ. ಆದರೂ ತಕ್ಷಣ ಅಪಾಯದ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಬ್ಲಾಕ್ಮೇಲ್ ಕರೆಗಳು:
ನಿನ್ನೆ ಸಂಜೆಯಿಂದ ಸಾಕಷ್ಟು ಸುಳ್ಳು ಕರೆಗಳು ಬಂದಿವೆ. ಅಲ್ಲಿ ಹಾವು ಬಂದಿದೆ. ಇಲ್ಲಿ ಹಾವು ನುಗ್ಗಿವೆ ಎಂದು ಸುಳ್ಳು ಕರೆಗಳು ಬರುತ್ತಿವೆ. ವನ್ಯಜೀವಿ ಸಂರಕ್ಷಕರಿಗೆ ಗೌರವಧನ ನೀಡಿಲ್ಲ ಹೀಗೆ ಸಾಕಷ್ಟು ಕರೆಗಳು ಬಂದಿವೆ ಎಂದು ಹೇಳಿದರು.
ನಿನ್ನೆ ಸಂಜೆಯಿಂದ ಇಂದು ಬೆಳಗಿನ ಜಾವದತನಕ ನನ್ನ ಮೊಬೈಲ್ಗೆ ಯಾರೋ ಕರೆ ಮಾಡಿದ್ದಾರೆ. ಇದೆಲ್ಲ ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿರುವ ಕರೆಗಳು ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಚೋಳರಾಜನ್ ಬೇಸರ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕರ ವಿರುದ್ಧ ಏಕವಚನ ಪ್ರಯೋಗ:
ಸಭೆಯಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ ಉಪಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜನ್ ಅವರು, ಏಕವಚನದಲ್ಲಿ ಮಾತನಾಡಿದ್ದಾರೆ ಜನಪತ್ರಿನಿಧಿಗಳಿಗೆ ಅವರು ಬೆಲೆ ಕೊಡುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಚೋಳರಾಜನ್ ಅವರು ಯಾರೊಂದಿಗೊ ಪ್ರತಿಪಕ್ಷ ನಾಯಕರ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವ ಆಡಿಯೋ ತೋರಿಸಲು ಪದ್ಮನಾಭರೆಡ್ಡಿ ಮುಂದಾದಾಗ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಅವಕಾಶ ಕೊಡಲಿಲ್ಲ.
ಜನಪ್ರತಿನಿಧಿಗಳಿಗೆ ಯಾರೇ ಅಪಮಾನ ಮಾಡಿದರು ನಾವು ಸಹಿಸಲ್ಲ, ಏನೇ ಸಮಸ್ಯೆ ಇದ್ದರು, ಮೇಯರ್ ಛೇಂಬರ್ನಲ್ಲಿ ಪ್ರಸ್ತಾಪಿಸಿ. ಕೌನ್ಸಿಲ್ ಸಭೆಯಲ್ಲಿ ಇದನ್ನೆಲ್ಲ ಪ್ರಸ್ತಾಪಿಸುವುದು ಬೇಡ ಎಂದು ಹೇಳಿದರು.