ತುಮಕೂರು: ದೇವೇಗೌಡರ ವಿರುದ್ಧ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ಸು ಪಡೆಯಲು ಮುದ್ದ ಹನುಮೇಗೌಡ ಹಾಗೂ ಕೆ.ಎನ್ ರಾಜಣ್ಣ ತಲಾ 3.5 ಕೋಟಿ ಹಣ ಪಡೆದಿದ್ದಾರೆ ಎಂಬ ಆಡಿಯೋ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.
ಆದರೆ ಈ ಕುರಿತು ಸ್ಪಷ್ಟಪಡಿಸಿರುವ ಮುದ್ದ ಹನುಮೇಗೌಡ, ನಾವು ಪ್ರಾಮಾಣಿಕವಾಗಿದ್ದೇವೆ. ಕೆಲಸಕ್ಕೆ ಬರದವನು ಮಾತಾಡಿದ್ದಾನೆ. ಮಾತಾಡಿದ್ದಕ್ಕೆಲ್ಲಾ ಕಂಪ್ಲೆಂಟ್ ಕೊಡೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.
ನಾನು ಏನು ಎಂದು ಜಿಲ್ಲೆಯ ಜನರಿಗೆ ಗೊತ್ತು. ಮುದ್ದಹನುಮೇಗೌಡ ಆ ಥರನಾ ಅಂತಾ ಕೇಳಿ. ನಾನು ನಿಷ್ಕಳಂಕವಾಗಿ ಬದುಕುತ್ತಿದ್ದೇನೆ ಎಂದಿದ್ದಾರೆ.
ನಾನು ಮಾತಾಡಿದ್ದು ನಿಜ:
ಇನ್ನು ಈ ಆಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಆಪ್ತ ದರ್ಶನ್, ನಾನು ಮಾತಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಆದರೆ ಆಡಿಯೋದಲ್ಲಿ ಇರೋದೆಲ್ಲಾ ನಿಜವಲ್ಲ. ಮಾತಾಡಿದ್ದೆಲ್ಲಾ ನಿಜ ಆಗಿರಲ್ಲ, ಸುಮ್ನೆ ಮಾತಾಡಿದ್ದೇವೆ. ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದಿದ್ದಾರೆ.
ನಾಮಪತ್ರ ಹಿಂದೆ ಪಡೆದಿದ್ದ ನಾಯಕರು:
ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂದು ಪಕ್ಷದ ನಾಯಕರ ಮಾತನ್ನು ಧಿಕ್ಕರಿಸಿ, ಮುದ್ದ ಹನುಮೇಗೌಡ ಹಾಗೂ ಕೆ.ಎನ್ ರಾಜಣ್ಣ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆಘಳಿಗೆಯಲ್ಲಿ ಪಟ್ಟು ಸಡಿಲಿಸಿದ ಮುದ್ದಹನುಮೇಗೌಡ ನಾಮಪತ್ರ ಹಿಂದೆ ಪಡೆದಿದ್ದರು. ಈ ರೀತಿ ನಾಮಪತ್ರ ವಾಪಸ್ಸು ಪಡೆಯಲು ಕಾರಣ ಕೋಟಿ ಕೋಟಿ ಹಣ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ಮುದ್ದಹನುಮೇಗೌಡ ಅವರಿಗೆ ಹಣ ನೀಡಿ ಡೀಲ್ ನಡೆಸಿರುವ ಬಗ್ಗೆ ಡಿಸಿಎಂ ಪರಮೇಶ್ವರ್ ಬೆಂಬಲಿಗ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.
ಆಡಿಯೋದಲ್ಲಿ ಇಬ್ಬರಿಗೂ ತಲಾ 3.5 ಕೋಟಿ ಹಣ ನೀಡುವುದಾಗಿ ಡಿಸಿಎಂ ಪರಮೇಶ್ವರ್ ಬೆಂಬಲಿಗ ದರ್ಶನ್, ಇಬ್ಬರು ನಾಯಕರ ಸಂಧಾನ ಮಾಡಿದ್ದಾರೆ.