ಲೋಕಸಭಾ ಚುನಾವಣೆ: ವಾರಾಣಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಾಣಸಿ: ದೇವಾಲಯಗಳ ನಾಡು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಎರಡನೇ ಅವಧಿಗೆ ಆಯ್ಕೆ ಬಯಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನರೇಂದ್ರ ಮೋದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಮೋದಿ ನಾಮಪತ್ರಕ್ಕೆ ಸೂಚಕರಾಗಿ ಡಾ. ಅನ್ನಪೂರ್ಣ ಶುಕ್ಲಾ, ಡಾ. ಜಗದೀಶ್ ಗುಪ್ತಾ ಮತ್ತು ಡೋಮರಾಜ್ ಜಗದೀಶ್ ಎಂಬುವರು ಸಹಿ  ಹಾಕಿದರು. ಅನ್ನಪೂರ್ಣ ಅವರ ಕಾಲಿಗೆ ನಮಸ್ಕರಿಸಿ ಪ್ರಧಾನಿ ಮೋದಿ  ವಂದನೆ ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎನ್ ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು. ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ನಿತೀಶ್ ಕುಮಾರ್,  ರಾಮ್ ವಿಲಾಸ್ ಪಾಸ್ವನ್ , ಉದ್ದವ್ ಠಾಕ್ರೆ ಮತ್ತಿತರ ನಾಯಕರು ನರೇಂದ್ರ ಮೋದಿಗೆ ಶಾಲು ಹೂದಿಸಿ, ಹೂ ಗುಚ್ಛ ನೀಡುವ ಮೂಲಕ ಶುಭ ಕೋರಿದರು.

ವಾರಾಣಸಿಯಲ್ಲಿರುವ ಕಾಲ ಬೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ನರೇಂದ್ರ ಮೋದಿ ಜಿಲ್ಲಾಧಿಕಾರಿ ಕಚೇರಿಗೆ ತೆರೆಳಿದರು.ಈ ಸಂದರ್ಭ ಜನಪ್ರವಾಹವೇ ಹರಿದುಬಂದಿತ್ತು.

ವಾರಾಣಸಿ ಜನತೆಗೆ ಧನ್ಯವಾದ:

ಇದಕ್ಕೂ ವಾರಾಣಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆಯ ರೋಡ್ ಶೋನಲ್ಲಿ ನಿಮ್ಮ ಶ್ರಮವನ್ನು ಕಂಡಿದ್ದು, ಇಡೀ ವಾರಾಣಸಿ ನಗರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ದೇಶದಲ್ಲಿ ಬಿಜೆಪಿ ಪರ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಅಲೆ ಎದ್ದಿದ್ದು, ದೇಶ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.

ಪಕ್ಷ ಅಥವಾ ನನ್ನ ಪರ ಯಾರೇ ಏನೇ ಅವಮಾನ ಮಾಡಿದರೂ ಅದನ್ನು ನೇರವಾಗಿ ನನಗೆ ತಿಳಿಸಿ, ಕೆಸರಲ್ಲಿ ಕಮಲ ಅರಳಿಸುವುದು ಹೇಗೆಂದು ನನಗೆ ಗೊತ್ತಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ