ಲಕ್ನೋ: ವ್ಯಕ್ತಿಯೊಬ್ಬ ಯುವತಿಯರಿಬ್ಬರನ್ನು ಅತ್ಯಾಚಾರ ಮಾಡಿದ್ದಾನೆ. ಆದರೆ ಆತನ ಪತ್ನಿ ಅವರನ್ನು ರಕ್ಷಿಸದೇ ಪತಿಯ ರೇಪ್ ವಿಡಿಯೋವನ್ನು ತಾನೇ ರೆಕಾರ್ಡ್ ಮಾಡಿರುವಂತಹ ಆಘಾತಕಾರಿ ಘಟನೆ ಉತ್ತರದ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಒತ್ತೆಯಾಳಾಗಿಟ್ಟುಕೊಂಡಿದ್ದ ಆರೋಪಿ ಸಂಜೀವ್ ಲೊಹಾನ್ ನಮ್ಮಿಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆಯರು ಆರೋಪಿಸಿ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಮುಜಾಫರ್ ನಗರದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯರನ್ನು ಬ್ಲಾಕ್ಮೇಲ್ ಮಾಡುವ ಸಲುವಾಗಿ ಪತ್ನಿ ಇಂತಹ ನೀಚ ಕೆಲಸ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
22 ರಿಂದ 23 ವರ್ಷದ ಯುವತಿಯರಿಬ್ಬರನ್ನು ಆರೋಪಿ ಸಂಜೀವ್ ಲೋಹಾನ್ ಹೊಸ ಮಂಡಿ ಪ್ರದೇಶದಲ್ಲಿ ಒತ್ತೆಯಾಳಾಗಿಟ್ಟುಕೊಂಡಿದ್ದನು. ಬಳಿಕ ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾನೆ. ಪತಿ ಯುವತಿಯರ ಮೇಲೆ ಅತ್ಯಾಚಾರ ಮಾಡುವ ದೃಶ್ಯವನ್ನು ಪತ್ನಿ ರೀಟಾ ಲೊಹಾನ್ ರೆಕಾರ್ಡ್ ಮಾಡಿಕೊಂಡಿದ್ದು, ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ವಿಡಿಯೋ ಮೂಲಕ ಬ್ಲಾಕ್ಮೇಲ್ ಮಾಡಿದ್ದ ನಂತರ ಇತರರು ಕೂಡ ಯುವತಿಯರ ಮೇಲೆ ಅತ್ಯಾಚಾರ ನಡೆಸಿರುವುದು ತಿಳಿದುಬಂದಿದೆ. ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಿದ್ದೇವೆ. ಆದರೆ ಯಾವ ವಿಚಾರಕ್ಕೆ ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.