ಬೆಂಗಳೂರು,ಏ.26-ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದೆ.
ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರೆ ಲೋಕಸಭಾ ಚುನಾವಣೆಯ ಮುನ್ನವೇ ಬಿಜೆಪಿಯ ಅಧಿಕಾರ ದಾಹ ಹೆಚ್ಚಿದೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿತವಾಗುವ ಅಪಾಯವಿದೆ ಎಂದು ಹೇಳಿದೆ.
ಬಿಜೆಪಿ ಹೈಕಮಾಂಡ್ ನೀಡಿದ ಈ ಸೂಚನೆಯ ಹಿನ್ನೆಲೆಯಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ಮೇ 23ರವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವ ಶಾಸಕರ ಜೊತೆಯೂ ಕರ್ನಾಟಕದ ನಾಯಕರು ಮಾತನಾಡಕೂಡದು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಹೀಗಾಗಿ ಸಧ್ಯಕ್ಕೆ ಬಂಡಾಯದ ಮಾತನಾಡುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಬಾರದೆಂದು ಕೋರ್ ಕಮಿಟಿ ಸಭೆ ನಿರ್ಧರಿಸಿದೆ.
ಉನ್ನತ ಮೂಲಗಳ ಪ್ರಕಾರ, ಮೇ 23ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಹೈಕಮಾಂಡ್ ಅತೀವ ನಿರೀಕ್ಷೆ ಇಟ್ಟುಕೊಂಡಿದೆ.ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ. ಇಲ್ಲದಿದ್ದರೂ ಎನ್ಡಿಎ ಮಿತ್ರ ಪಕ್ಷಗಳ ಜತೆಗೂಡಿ ಅಧಿಕಾರ ಹಿಡಿಯುತ್ತೇವೆ ಎಂಬ ಭರವಸೆಯನ್ನು ಇಟ್ಟುಕೊಂಡಿದೆ.
ಹೀಗೆ ಅಧಿಕಾರ ಹಿಡಿಯುವವರೆಗೆ ಯಾರೂ ರಾಜ್ಯ ಮಟ್ಟದಲ್ಲಿ ಸರ್ಕಾರ ರಚಿಸಲು ಅಥವಾ ಇರುವ ಸರ್ಕಾರವನ್ನು ಕೆಡವಲು ಉತ್ಸುಕತೆ ತೋರಬಾರದು ಎಂಬುದು ಹೈಕಮಾಂಡ್ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲದ ಕಾರ್ಯಾಚರಣೆ ಹಲವು ಹಂತಗಳಲ್ಲಿ ವಿಫಲಗೊಂಡಿವೆ.ಇದರಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಿದೆ.ಹೀಗಾಗಿ ಕರ್ನಾಟಕದಲ್ಲಿ ಚುನಾವಣೆ ಮುಗಿಯಿತು ಎಂಬ ಕಾರಣಕ್ಕಾಗಿ ಆಪರೇಷನ್ ಕಮಲದ ಕಾರ್ಯಾಚರಣೆಗೆ ಮುಂದಾಗಬೇಡಿ ಎಂದು ನಿರ್ದೇಶಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕೂಡಲೇ ಕರ್ನಾಟಕದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೆಯದ ಇಪ್ಪತ್ತಕ್ಕೂ ಹೆಚ್ಚು ಶಾಸಕರು ನಮ್ಮ ಕಡೆ ಬರಲಿದ್ದಾರೆ.
ಈ ವಿಷಯದಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಹೀಗಾಗಿ ಮೇ 23ರವರೆಗೆ ಎಲ್ಲರೂ ಮೌನವಾಗಿರಿ.ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ವರಿಷ್ಠರು ರಾಜ್ಯ ಘಟಕದ ನಾಯಕರಿಗೆ ಹೇಳಿದ್ದಾರೆ.