ಬೆಂಗಳೂರು, ಏ.26- ಪಾಲಿಕೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ತೀರ್ಮಾನಿಸಿದೆ.
ನಾಳೆ ಸಂಜೆ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಸಂದರ್ಭದಲ್ಲಿ ಉತ್ತಮ ನೌಕರರಿಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ರಾಜ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಉದ್ಘಾಟಿಸಲಿದ್ದು, ಡಿಎಸ್ಎಸ್ ಅಂಬೇಡ್ಕರ್ ವಾದದ ಅಧ್ಯಕ್ಷ ಮಾವಳ್ಳಿ ಶಂಕರ್, ಪಾಲಿಕೆ ಉಪ ಆಯುಕ್ತರಾದ ಲಕ್ಷ್ಮಿದೇವಿ, ಹೆಲ್ಪಿಂಗ್ ಫೌಂಡೇಷನ್ ಸಂಸ್ಥಾಪಕರಾದ ಡಾ.ಸೂರ್ಯಚಂದ್ರ ಮಂಜಣ್ಣ, ಜಯಕರ್ನಾಟಕ ಸಂಘಟನೆಯ ಮುಖಂಡ ಯೋಗಾನಂದ್, ಅಹಿಂದ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮುತ್ತುರಾಜ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಪಾಲಿಕೆ ವಿದ್ಯಾಧಿಕಾರಿ ಹರೀಶ್, ಸಹಾಯಕ ಕಾನೂನು ಸಲಹೆಗಾರ ಜಯಚಂದ್ರ ರೆಡ್ಡಿ, ಉಪ ಆಯುಕ್ತರಾದ ಶಶಿಕಲಾ, ಆರೋಗ್ಯ ವೈದ್ಯಾಧಿಕಾರಿ ಡಾ.ವೇದಾವತಿ, ಸಹ ಕಂದಾಯ ಅಧಿಕಾರಿಗಳಾದ ಎನ್.ಕೃಷ್ಣ, ಮಾಲತಿ, ಮೌಲ್ಯಮಾಪಕ ಶೇಷಗಿರಿ, ಕಂದಾಯ ಪರಿವೀಕ್ಷಕ ಎ.ಜಿ.ಬಾಬು, ಹಿರಿಯ ಆರೋಗ್ಯಪರಿವೀಕ್ಷಕ ಮೆಹಬೂಬ್ ಹಾಗೂ ಚಾಲಕ ಮದುರೈ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಡಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ , ಪದಾಧಿಕಾರಿಗಳಾದ ಡಿ.ರಾಮಚಂದ್ರ, ಕೆ.ಮಂಜೇಗೌಡ, ನಂಜಪ್ಪ, ಧರ್ಮರಾಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.