ಮೈಸೂರು, ಏ.25- ಶ್ರೀಲಂಕಾದ ಹಲವು ಕಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೆಆರ್ಎಸ್ ಅಣೆಕಟ್ಟು ಹಾಗೂ ಬೃಂದಾವನಕ್ಕೆ ಬಿಗಿಭದ್ರತೆಯನ್ನು ಒದಗಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರವಹಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟು, ಬೃಂದಾವನ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಸಂತಫಿಲೋಮಿನಾ ಚರ್ಚ್, ವೇಣು ಗೋಪಾಲಸ್ವಾಮಿ ದೇವಸ್ಥಾನ, ರಂಗನತಿಟ್ಟು ಪಕ್ಷಿಧಾಮ, ರಂಗನಾಥ ಸ್ವಾಮಿ ದೇವಸ್ಥಾನ, ಟಿಪ್ಪುಸುಲ್ತಾನ್ ಸಮಾಧಿ ಹಾಗೂ ದರೀಯಾದೌಲತ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24ಗಂಟೆಯೂ 3ಪಾಳಿಯಲ್ಲಿ ಕೆಆರ್ಎಸ್ನಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ.
ಹಲವು ಪ್ರವಾಸಿತಾಣಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಪ್ರತಿದಿನ ವೀಕ್ಷಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸಿತಾಣಗಳಿಗೆ ಆಗಮಿಸುವ ಪ್ರತಿಯೊಂದು ವಾಹಗಳು ಮತ್ತು ಪ್ರವಾಸಿಗರ ಬ್ಯಾಗ್ಗಳನ್ನು ಪರಿಶೀಲಿಸಲಾಗುತ್ತಿದೆ.