ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ

ಚಾಮರಾಜನಗರ, ಏ.25- ತುಂಬು ಗರ್ಭಿಣಿಯೊಬ್ಬರು ಎರಡು ವರ್ಷದ ಮಗುವಿನ ಮೇಲೆ ಸೀಮೆಎಣ್ಣೆ ಸುರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಮೋಳೆ ಗ್ರಾಮದಲ್ಲಿ ನಡೆದಿದೆ.

ಮಹಾಲಕ್ಷ್ಮಿ (25) ಹಾಗೂ ಈಕೆಯ ಎರಡೂ ವರ್ಷದ ಮಗು ಪ್ರಣತಿ ಮೃತಪಟ್ಟ ದುರ್ದೈವಿಗಳು.

ದೊಡ್ಡಮೋಳೆ ಗ್ರಾಮದ ಸೋಮಶೇಖರ್ ಎಂಬುವವರನ್ನು ಮಹಾಲಕ್ಷ್ಮಿ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಂಡಿದ್ದರು.

ಸಾಂಸಾರಿಕ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಮನನೊಂದು ಮಹಾಲಕ್ಷ್ಮಿ ಮಗು ಪ್ರಣತಿಗೆ ಸೀಮೆಎಣ್ಣೆ ಸುರಿದು ನಂತರ ತಾನೂ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ