ಬೆಂಗಳೂರು,ಏ.25-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿದ್ದಂತೆ ತಳಮಳಗೊಂಡಿರುವ ದೋಸ್ತಿ ಪಕ್ಷದ ನಾಯಕರು ಮುಂದೆ ಎದುರಾಗಲಿರುವ ಬಿಕ್ಕಟ್ಟು ಪರಿಹರಿಸುವ ಬಗ್ಗೆ ಇಂದು ಮಹತ್ವದ ಮಾತುಕತೆ ನಡೆಸಿದರು.
ರಮೇಶ್ ಜಾರಕಿಹೊಳಿ ತಾವು ರಾಜೀನಾಮೆ ನೀಡುವುದಷ್ಟೇ ಅಲ್ಲದೆ ತಮ್ಮೊಂದಿಗೆ ಮತ್ತಷ್ಟು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿರುವುದಕ್ಕೆ ಬ್ರೇಕ್ ಹಾಕಲು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು.
ಬೆಳಗ್ಗೆ ಪರಮೇಶ್ವರ್ ಅವರು ಡಿಕೆಶಿ ಮನೆಗೆ ಭೇಟಿ ನೀಡಿ ಬಹಳಷ್ಟು ಹೊತ್ತು ಮಾತುಕತೆ ನಡೆಸಿದರು. ರಮೇಶ್ ಜಾರಕಿಹೊಳಿ ಆಪ್ತರೆಂದು ಹೇಳಲಾಗಿರುವ ಸೀಮಂತ್ ಪಾಟೀಲ್ ಅವರನ್ನು ಡಿಕೆಶಿ ತಮ್ಮ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದರು.
ರಮೇಶ್ ಜಾರಕಿಹೊಳಿ ಯಾವುದೇ ನಿರ್ಧಾರವನ್ನಾದರೂ ತೆಗೆದುಕೊಳ್ಳಲಿ ನೀವು ಅವರನ್ನು ಅನುಸರಿಸಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಸೀಮಂತ್ ಪಾಟೀಲ್ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲಿಂದ ಡಿಕೆಶಿ ಮತ್ತು ಪರಂ ಇಬ್ಬರೂ ಸಿಎಂ ಕುಮಾರಸ್ವಾಮಿ ಅವರನ್ನು ಜೆಪಿನಗರದ ನಿವಾಸದಲ್ಲಿ ಭೇಟಿಯಾಗಿ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ, ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರ, ಪರಿಹಾರದ ಮಾರ್ಗೋಪಾಯಗಳು, ರಮೇಶ್ ಜಾರಕಿಹೊಳಿ ಅವರ ಮನವೊಲಿಕೆ ಪ್ರಯತ್ನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರತಿರೋಧ ರಾಜಕಾರಣದಿಂದಾಗಿ ರಮೇಶ್ ಜಾರಕಿಹೊಳಿ ಬಂಡಾಯವೆದ್ದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡಲು ಇರುವ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯದಲ್ಲಿ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದಾರೆಂದು ಹೇಳಲಾದ ಮಹೇಶ್ ಕುಮಟಳ್ಳಿ ಅವರು, ತಾವು ಕಾಂಗ್ರೆಸ್ ಬಿಡುವುದಿಲ್ಲ. ಪಕ್ಷದಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ರಮೇಶ್ ಜಾರಕಿಹೊಳಿ ಇಂದು ಅಜ್ಞಾತ ಸ್ಥಳಕ್ಕೆ ತೆರಳಿದ ನಂತರ ಮಹೇಶ್ ಕಮಟಳ್ಳಿ ಕೂಡ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಅವರನ್ನು ಸಂಪರ್ಕಿಸಿ ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಇನ್ನು ಬಳ್ಳಾರಿಯ ಗ್ರಾಮಾಂತರ ಶಾಸಕ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಅವರ ಮನವೊಲಿಸುವ ಜವಾಬ್ದಾರಿಯನ್ನು ಡಿಕೆಶಿ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಸೆಳೆಯಲು ದೋಸ್ತಿ ನಾಯಕರು ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರನ್ನು ಸೆಳೆದುಕೊಂಡು ಹೊಸ ರೀತಿಯ ಕಾರ್ಯತಂತ್ರ ರೂಪಿಸಲು ದೋಸ್ತಿ ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.