ಬಾಂಬ್ ದಾಳಿ ಚಿತ್ರಣ ನೆನಸಿಕೊಂಡರೆ ಮೈ ಜುಮ್ಮೆನ್ನುತ್ತದೆ-ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ

ಬೆಂಗಳೂರು,ಏ.25- ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ಬಾಂಬ್ ದಾಳಿ ಚಿತ್ರಣವನ್ನು ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ! ಬಾಂಬ್ ಸ್ಫೋಟದ ನಂತರ ತುಂಬ ಕೆಟ್ಟ ಪರಿಸ್ಥಿತಿ ಕಂಡುಬರುತ್ತಿದೆ ಎಂದು ನೆಲಮಂಗಲದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಯಾರಿಗೂ ಇಂಥ ಪರಿಸ್ಥಿತಿ ಬರಬಾರದು ಎಂದೆನಿಸುತ್ತದೆ. ವೈರಿಗಳಿಗೂ ಕೂಡ ಅಂತಹ ಕೆಟ್ಟ ಪರಿಸ್ಥಿತಿ ಬರಬಾರದು ಎಂದರು.

ಜೆಡಿಎಸ್‍ನ ಏಳು ಮಂದಿ ಮುಖಂಡರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಕೊಲಂಬೋದ ಶಾಂಗ್ರೀಲಾ ಹೋಟೆಲ್ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರೆಲ್ಲರೂ ಮೃತಪಟ್ಟಿದ್ದರು.

ಅವರ ಮೃತದೇಹವನ್ನು ಶ್ರೀಲಂಕಾದಿಂದ ಬೆಂಗಳೂರಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಅಡಿ ಬಾಂಬ್ ಸ್ಫೋಟದಿಂದ ಕೊಲಂಬೊ ತತ್ತರಿಸಿಹೋಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಲ್ಲಿನ ಹೈಕಮೀಷನರ್‍ನೊಂದಿಗೆ ಮಾತುಕತೆ ನಡೆಸಿ ನಮ್ಮ ಹಾದಿಯನ್ನು ಸುಗಮಗೊಳಿಸಿದರು. ಶ್ರೀಲಂಕಾ ಸರ್ಕಾರವು ಸೂಕ್ತ ಸಹಕಾರವನ್ನು ನೀಡಿತು ಎಂದರು.

ವಿಧಾನಪರಿಷತ್‍ನ ಮಾಜಿ ಸದಸ್ಯ ವಿ.ಕೃಷ್ಣಪ್ಪ , ಮುಖಂಡರಾದ ತಿಮ್ಮರಾಯಪ್ಪ , ರಾಮಸ್ವಾಮಿ ಸೇರಿದಂತೆ ನಮ್ಮ ತಂಡ ಕೊಲಂಬೊ ತಲುಪಿದಾಗ ಕಫ್ರ್ಯೂ ಜಾರಿಯಲ್ಲಿತ್ತು. ಅಲ್ಲಿ ಓಡಾಡಲು ವಾಹನವೂ ಸಿಗುತ್ತಿರಲಿಲ್ಲ. ಸಮೀಪದ ಸರ್ವೀಸ್ ಅಪಾರ್ಟ್‍ಮೆಂಟ್‍ನಲ್ಲಿ ಉಳಿದುಕೊಂಡೆವು.

ನಂತರ ತಾವು ವೃತ್ತಿಪರ ವೈದ್ಯರಾಗಿದ್ದರಿಂದ ಆಸ್ಪತ್ರೆ ಭೇಟಿ ಕಷ್ಟವಾಗಲಿಲ್ಲ. ತಾವು ವೈದ್ಯರಾಗಿ ಸಾಕಷ್ಟು ಶವಗಳನ್ನು ನೋಡಿದ್ದರೂ ಆಸ್ಪತ್ರೆಯಲ್ಲಿ ಶವಗಳಿದ್ದ ಭೀಕರ ಪರಿಸ್ಥಿತಿಯನ್ನು ನೋಡಿ ಮೈ ಜುಮ್ಮೆಂದಿತು.

ಒಂದೊಂದು ಶವ ಒಂದೊಂದು ರೀತಿ ಅಸ್ತವ್ಯಸ್ತವಾಗಿತ್ತು.ವೈದ್ಯರ ಸಂಖ್ಯೆ ವಿರಳವಾಗಿತ್ತು.ನೂರಾರು ಶವಗಳಿದ್ದು, ಅವುಗಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು.ಮತ್ತೊಂದೆಡೆ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದು ಸವಾಲಾಗಿತ್ತು.

ಇಬ್ಬರು ನ್ಯಾಯಾಧೀಶರು ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಏಳು ಜನರನ್ನು ನಾವು ಗುರುತಿಸಿ ಅವರ ಕೇಳಿದ ಪ್ರತಿಯೊಂದು ಮಾಹಿತಿಯನ್ನು ಒದಗಿಸಿದೆವು. ಹೆಸರು, ವಿಳಾಸ, ಸಂಬಂಧ , ಕುಟುಂಬದ ಸದಸ್ಯರು ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರತಿಯೊಂದು ತಾಳೆಯಾದಾಗ ಮಾತ್ರ ಮೃತದೇಹಗಳನ್ನು ಹಸ್ತಾಂತರಿಸುತ್ತಾರೆ.ನಾವು ಮುನ್ನೆಚ್ಚರಿಕೆಯಾಗಿ ಗುರುತಿಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದೆವು. ಅವುಗಳನ್ನು ಒದಗಿಸಿ ಮೃತದೇಹಗಳು ನಮ್ಮವು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆವು.

ಈ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಊಹೆಗೂ ಮೀರಿದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.ಜನರು ಭಯಭೀತರಾಗಿದ್ದಾರೆ. ಅಂಗಡಿ, ಹೋಟೆಲ್‍ಗಳು, ಸರಿಯಾಗಿ ಬಾಗಿಲು ತೆರೆಯುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಬಿಗಾಡಿಸಿದೆ.ಆತಂಕದಿಂದ ಪ್ರವಾಸಿಗರು ಕೂಡ ಹಿಂದೆ ಬೀಳುವಂತಾಗಿದೆ.

ಒಟ್ಟಾರೆ ಹೇಳುವುದಾದರೆ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಸುಮಾರು 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ತಮ್ಮ ಅನುಭವವನ್ನು ಶಾಸಕರು ಹಂಚಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ