![madhu](http://kannada.vartamitra.com/wp-content/uploads/2019/04/madhu-1-677x381.jpg)
ರಾಯಚೂರು, ಏ.25- ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣ ಶೀಘ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಯಚೂರಿನಲ್ಲಿ ಇಂದು ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಮಾಣಿಕ್ಯಪ್ರಭು ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಹಲವು ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು, ವಿದ್ಯಾರ್ಥಿಗಳು ವಿದ್ಯಾರ್ಥಿನಿ ಮಧುಪತ್ತಾರ್ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ನಗರದಲ್ಲಿ ಸುಮಾರು ಐದು ಕಿಮೀ ಉದ್ದ ಸಾಗಿದ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.
ಜಸ್ಟೀಸ್ ಫಾರ್ ಮಧು ಎಂಬ ಫಲಕಗಳನ್ನು ಹಿಡಿದು ಸಾಗಿದರು. ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸುದರ್ಶನ್ನನ್ನು ವ್ಯಾಪಕ ವಿಚಾರಣೆಗೆ ಒಳಪಡಿಸಿ, ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಇಂತಹ ಘಟನೆಗಳು ಯಾವತ್ತಿಗೂ ಮರುಕಳಿಸಬಾರದು. ಯಾವ ಹೆಣ್ಣು ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಈಗಾಗಲೇ ತನಿಖೆ ಆರಂಭಿಸಿದೆ. ಆರೋಪಿ ಸುದರ್ಶನ್ ಯಾದವ್ನಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲು ವಿಳಂಬ ಮಾಡಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಪ್ರಕರಣ ಸಂಬಂಧ ರಾಯಚೂರು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ಹೆಚ್ಚಾಗಿದೆ. ಇದೇ 27ರಂದು ರಾಯಚೂರಿನಲ್ಲಿ ಮಧುಪತ್ತಾರ ನಿಗೂಢ ಸಾವು ಖಂಡಿಸಿ ವಿಶ್ವಕರ್ಮ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.